ಪ್ರಕೃತಿದತ್ತ ಕೊಡುಗೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು -ಹೇಮಾವತಿ ವಿ. ಹೆಗ್ಗಡೆ.

ಪ್ರಕೃತಿದತ್ತ ಕೊಡುಗೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು -ಹೇಮಾವತಿ ವಿ. ಹೆಗ್ಗಡೆ.
Facebook
Twitter
LinkedIn
WhatsApp

ಬೆಳ್ತಂಗಡಿ: ನೀರು ಅತೀ ಅಮೂಲ್ಯವಾದ ಸಂಪತ್ತಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಲು ಪ್ರಕೃತಿಯು ನೀಡಿದ ಕೊಡುಗೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶುದ್ಧಗಂಗಾ ಪ್ರೇರಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಚರ್ತುದಾನಗಳಲ್ಲಿ ಔಷಧ ದಾನವೂ ಒಂದು. ಶುದ್ಧನೀರು ಮನುಷ್ಯನಿಗೆ ಆರೋಗ್ಯಯುತವಾಗಿರಲು ಪ್ರಕೃತಿಯು ನೀಡಿದ ಕೊಡುಗೆಯಾಗಿದ್ದು, ನೀರು ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಜನ ಸಾಮಾನ್ಯರು ಪರಿಶುದ್ಧ ನೀರನ್ನು ಸೇವಿಸದೆ ಪ್ಲೋರೈಡ್, ಕ್ಲೋರೈಡ್‌ನಿಂದ ಕೂಡಿದ ಅಶುದ್ಧ ನೀರನ್ನು ಕುಡಿಯುವುದರಿಂದ ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುತ್ತಿರುವ ಅನಾರೋಗ್ಯ ಸಮಸ್ಯೆಯನ್ನು ಮನಗಂಡು ಎಲ್ಲಿ ನೋವಿದೆಯೋ ಅಲ್ಲಿ ಔಷಧಿ ನೀಡಬೇಕೆಂದು ಶುದ್ಧ ನೀರಿನ ಸಮಸ್ಯೆ ಇರುವಲ್ಲಿ ಯೋಜನೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ನೀರನ್ನು ಪೂಜನೀಯ ಭಾವನೆಯಿಂದ ನೋಡಿ ಗಂಗಾಪೂಜೆ, ತೀರ್ಥ, ಅಭಿಷೇಕಗಳಲ್ಲಿ ಬಳಸಲಾಗುತ್ತಿದ್ದು; ಮಾನವ ಇಚ್ಛಾಶಕ್ತಿ ಇಲ್ಲದೆ ಪ್ರಕೃತಿ ನೀಡಿದ ಕೊಡುಗೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿ ಮಲಿನ ಮಾಡಿರುವುದರಿಂದ ಇವತ್ತು ನಾವು ಸೇವಿಸುವ ಆಹಾರ, ನೀರು, ಗಾಳಿ, ಭೂಮಿ ಎಲ್ಲಾ ವಿಷಯುಕ್ತವಾಗಿದೆ. ಪ್ರಕೃತಿದತ್ತ ಕೊಡುಗೆಯನ್ನು ಉಳಿಸಿ ಬೆಳೆಸುವ ಬಗ್ಗೆ ಎಲ್ಲರೂ ಜಾಗೃತರಾಗಬೇಕಾಗಿದೆ. ಶುದ್ಧಗಂಗಾ ಘಟಕದ ಶುದ್ಧ ನೀರನ್ನು ಸೇವಿಸುವುದರಿಂದ ಅದೆಷ್ಟೋ ಜನರ ಆರೋಗ್ಯ ರಕ್ಷಣೆಯಾಗಿದೆ. ಅವರ ಜೀವನಮಟ್ಟದಲ್ಲಿ ಪರಿವರ್ತನೆಯಾಗಿದೆ ಈ ಬಗ್ಗೆ ಇನ್ನಷ್ಟು ಜನರಿಗೆ ಮಾಹಿತಿ ನೀಡಿ ಅವರಲ್ಲಿ ಇಚ್ಛಾಶಕ್ತಿ ಮೂಡಿಸಿ ನಿರಂತರ ಶುದ್ಧನೀರಿನ ಬಳಕೆ ಮಾಡುವಂತೆ ಎಲ್ಲಾ ಪ್ರೇರಕರು ಪ್ರಯತ್ನಿಸಿ ಜನಮನ ತಲುಪಿದರೆ ಅದು ಪುಣ್ಯದ ಕೆಲಸ ಎಂದು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಅಭಿಪ್ರಾಯಿಸಿದರು. ಕಾರ್ಯಕ್ರಮದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್‌ ಕುಮಾರ್ ಎಸ್.ಎಸ್‌. ಭಾಗವಹಿಸಿ ಮಾತನಾಡಿ; ಯೋಜನೆಯು ಶ್ರೀ ಕ್ಷೇತ್ರದ ಅನೇಕ ಸೇವೆಗಳನ್ನು ಸಮಾಜದ ಜನ ಸಾಮಾನ್ಯರಿಗೆ ತಲುಪಿಸುತ್ತಾ ಬಂದಿದೆ. ಇದರ ನಿರಂತರತೆಯನ್ನು ಕಾಯ್ದುಕೊಂಡು ನಮ್ಮ ಕೆಲಸವನ್ನು ಸದಾ ಸೇವಾ ಮನೋಭಾವನೆಯಿಂದ ಮಾದರಿಯಾಗಿ ಶ್ರೇಷ್ಠತೆಯನ್ನು ಉಳಿಸಿಕೊಂಡು ಮಾಡಿದರೆ ಅದು ಭಗವಂತನ ಸೇವೆ ಆಗುತ್ತದೆ. ಇದರಿಂದ ಸೇವೆಯ ಮೌಲ್ಯ ಹೆಚ್ಚುತ್ತದೆ ಎಂದು ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಸಮುದಾಯ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಜನಪರ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ್ದು, ಅವುಗಳಲ್ಲಿ ಶುದ್ಧಗಂಗಾ ಕಾರ್ಯಕ್ರಮವೂ ಒಂದು. ಜನ ಸಾಮಾನ್ಯರು ಶುದ್ಧನೀರನ್ನು ಬಳಸಿ ಖಾಯಿಲೆಯಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊಂಡ ಶುದ್ಧಗಂಗಾ ಕಾರ್ಯಕ್ರಮದಲ್ಲಿ ಶುದ್ಧ ನೀರಿನ ಸಮಸ್ಯೆ ಇರುವ ರಾಜ್ಯದ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 457 ಶುದ್ಧಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತೀನಿತ್ಯ 5.91ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.

Latest 5

Related Posts