ಪತ್ರಕರ್ತರ ಸಂಘದಿಂದ ಶಾಲೆಗೆ ಗ್ರೀನ್ ಬೋರ್ಡ್ ಹಸ್ತಾಂತರ

ಪತ್ರಕರ್ತರ ಸಂಘದಿಂದ ಶಾಲೆಗೆ ಗ್ರೀನ್ ಬೋರ್ಡ್ ಹಸ್ತಾಂತರ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರೀನ್ ಬೋರ್ಡ್ ಗಳನ್ನು ಜುಲೈ 29ರಂದು ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ; ಉತ್ತಮ ವಾತಾವರಣ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಉತ್ಸಾಹ ಹೆಚ್ಚಿರುತ್ತದೆ. ಇಂದಿನ ದಿನಗಳಲ್ಲಿ ಅಂಕಗಳೇ ಮಾನದಂಡವಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಕ್ಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿದೆ ಎಂದರು. ಶಾಲೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿ; ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರವು ಮಹತ್ವದ್ದು. ಪೋಷಕರು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳಿಗೆ ಸ್ಪಂದಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಕೈಗಳು ಒಟ್ಟಾದರೆ ತ್ವರಿತ ಪ್ರಗತಿ ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು. ಇಲಾಖೆಯ ವತಿಯಿಂದ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಿ ಮಾತನಾಡಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ; ಶಾಲಾ ಚಟುವಟಿಕೆಗಳಿಗೆ ಗ್ರೀನ್ ಬೋರ್ಡ್‌ಗಳು ಅತ್ಯಗತ್ಯವಾಗಿದ್ದು ತಾಲೂಕಿನ 179 ಸರಕಾರಿ ಶಾಲೆಗಳ ಪೈಕಿ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಮಕ್ಕಳಿಗೆ ಸಂಸ್ಕೃತಿಯೊಂದಿಗೆ ವಿದ್ಯೆ ನೀಡಬೇಕು. ಉತ್ತಮ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ಬದುಕಿಗೆ ಅಡಿಪಾಯ ಹಾಕುವುದರ ಜೊತೆ ಪ್ರೌಢಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಕಾರಣವಾಗುತ್ತದೆ ಎಂದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ ಶುಭ ಹಾರೈಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆರತಿ, ಮುಖ್ಯ ಶಿಕ್ಷಕಿ ಸಾವಿತ್ರಿ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಮಾಜಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಖಜಾಂಚಿ ಪುಷ್ಪರಾಜ ಶೆಟ್ಟಿ, ಸದಸ್ಯರಾದ ಬಿ.ಎಸ್. ಕುಲಾಲ್, ಅರವಿಂದ ಹೆಬ್ಬಾರ್, ಸಂತೋಷ್ ಕೋಟ್ಯಾನ್, ಅಚುಶ್ರೀ ಬಾಂಗೇರು, ತುಕಾರಾಂ ಬಿ. ಭಾಗವಹಿಸಿದ್ದರು.

Latest 5

Related Posts