ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಡಳಿತ ಎಂದಿನಂತೆ ಜುಲೈ 30ರ ಮುಂಜಾನೆಯೂ ಗಾಢ ನಿದ್ರೆಗೆ ಜಾರಿತ್ತು. ಕುಂಭದ್ರೋಣ ಮಳೆ ಸುರಿದರೂ ಈ ಕುಂಭಕರ್ಣರಿಗೆ ಎಚ್ಚರವಾಗಿರಲಿಲ್ಲ. ಕುಂಭದ್ರೋಣ ಮಳೆಗೆ ತಾಲೂಕು ಆಡಳಿತ ರಜೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಾಕಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು ಅದಾಗಲೇ ಹ್ಯಾಪ್ ಮೋರೆ ಹಾಕಿಕೊಂಡು ಮನೆಯಿಂದ ಶಾಲೆಗೆ ಅರ್ಧ ದೂರ ಕ್ರಮಿಸಿ ಆಗಿತ್ತು. ಅಷ್ಟು ಹೊತ್ತಿಗೆ ಎಚ್ಚೆತ್ತ ತಾಲೂಕು ಆಡಳಿತ ತಡಬಡಾಯಿಸಿ, ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಈ ಮಾಹಿತಿಯನ್ನು ಎಲ್ಲ ಮಾಧ್ಯಮಕ್ಕೆ ತಿಳಿಸುವ ಬದಲಾಗಿ ಸ್ಥಳೀಯ ಒಂದು ಪತ್ರಿಕೆಗೆ ತಿಳಿಸಿ, ಮಳೆನೀರಿನಲ್ಲೇ ಕೈ ತೊಳೆದುಕೊಂಡಿತು. ಪರಿಣಾಮ ಈ ಮಾಹಿತಿ ವೇಗವಾಗಿ ವಿದ್ಯಾರ್ಥಿಗಳ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ತಲುಪಲಿಲ್ಲ. ಸಾಕಷ್ಟು ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬಂದು ಮಳೆಯಲ್ಲಿ ಒದ್ದೆಯಾಗಿ ವಾಪಾಸ್ ಮನೆಗೆ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿತ್ತು.ಈ ಅವಾಂತರಕ್ಕೆ ನೇರವಾಗಿ ತಾಲೂಕು ತಹಶೀಲ್ದಾರರೇ ಹೊಣೆ ಎಂದು ಸ್ಥಳೀಯ ನಾಗರಿಕರು ಆರೋಪಿಸುತ್ತಿದ್ದಾರೆ. ಜುಲೈ 29ರ ರಾತ್ರಿ ಇಡೀ ಧಾರಾಕಾರವಾಗಿ ನಿರಂತರವಾಗಿ ಭಾರೀ ಮಳೆ ಸುರಿದಿತ್ತು. ಜುಲೈ 30ರ ಬೆಳಿಗ್ಗೆಯಾದರೂ ಮಳೆ ನಿಂತಿರಲಿಲ್ಲ. ತಾಲೂಕಿನ ವಿವಿದೆಡೆ ನದಿ, ಹೊಳೆ, ತೋಡುಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿತ್ತು. ಹೀಗಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಜುಲೈ 30ರ ಬೆಳಿಗ್ಗೆ ಸಾಕಷ್ಟು ಮುಂಚಿತವಾಗಿ ರಜೆ ಘೋಷಿಸಬೇಕಾಗಿದ್ದ ತಾಲೂಕು ಆಡಳಿತ, ಗಾಢ ನಿದ್ರೆಯಿಂದ ಎಚ್ಚೆತ್ತು ಸಾಕಷ್ಟು ವಿಳಂಬವಾಗಿ ರಜೆ ಘೋಷಿಸುವ ಮೂಲಕ ಶಾಲಾ ಮಕ್ಕಳನ್ನು ಮತ್ತು ಶಿಕ್ಷಕರನ್ನು ಇಕ್ಕಟ್ಟಿಗೆ ದೂಡಿದ್ದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.






