ಬೆಳ್ತಂಗಡಿ: ಸಂಘವು ಕಳೆದ ಸಾಲಿನಲ್ಲಿ 25.82 ಲಕ್ಷ ರೂಪಾಯಿ ಲಾಭ ಗಳಿಸಿದ್ದು ಸದಸ್ಯರಿಗೆ 10% ಡಿವಿಡೆಂಡ್ ನೀಡಲಾಗುವುದು ಎಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ತಿಳಿಸಿದರು. ಅವರು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಆಗಸ್ಟ್ 22ರಂದು ಜರಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸದಸ್ಯರಿಂದ ಸಂಗ್ರಹಿಸಿದ ರಬ್ಬರನ್ನು ದೇಶದಾದ್ಯಂತ ಮಾರಾಟ ಮಾಡಲಾಗಿದ್ದು, ಹೆಚ್ಚಾಗಿ ಉತ್ಪಾದಕರಿಗೆ ಮಾರಾಟ ಮಾಡುವತ್ತ ಗಮನ ಕೇಂದ್ರೀಕರಿಸಿ ಸದಸ್ಯರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಪ್ರಯತ್ನ ನಡೆಸಿರುತ್ತೇವೆ. ಸಂಘವು ಸುಮಾರು 150ಕ್ಕಿಂತಲೂ ಮೇಲ್ಪಟ್ಟು ಉತ್ಪಾದಕರೊಂದಿಗೆ ನೇರ ವ್ಯವಹಾರ ನಡೆಸಿದ್ದು, ಸಂಘದ ರಬ್ಬರಿಗೆ ಸ್ಥಿರವಾದ ಬೇಡಿಕೆ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ವರದಿ ಸಾಲಿನಲ್ಲಿ 3,927 ‘ಎ’ ತರಗತಿ ಸದಸ್ಯರು ಹಾಗೂ 28 ‘ಬಿ’ ತರಗತಿ ಸದಸ್ಯರಿದ್ದು 1.31 ಕೋಟಿ ರೂಪಾಯಿಗಿಂತ ಅಧಿಕ ಪಾಲು ಬಂಡವಾಳವನ್ನು ಹೊಂದಿದೆ.ಸಂಘದಲ್ಲಿ 19 ಕೋಟಿ ರೂಪಾಯಿಗಿಂತ ಅಧಿಕ ಠೇವಣಿ ಇದೆ. ಸಂಘದ ಒಟ್ಟು 33 ಖರೀದಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ವರದಿ ಸಾಲಿನಲ್ಲಿ ರಬ್ಬರಿಗೆ ಕಿಲೋ ಒಂದರ ಸರಾಸರಿ 150.42ರೂಪಾಯಿ ಧಾರಣೆ ಸಿಕ್ಕಿದ್ದು ಕಳೆದ ಸಾಲಿಗೆ ಹೋಲಿಸಿದರೆ ಇದು ಕಿಲೋವೊಂದರ 1.46 ರೂಪಾಯಿ ಹೆಚ್ಚು ಆಗಿರುತ್ತದೆ. ವರದಿ ವರ್ಷದಲ್ಲಿ 16,337 ಟನ್ ರಬ್ಬರ್ ಖರೀದಿಸಲಾಗಿದೆ. ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರ್ ಹಾಲು ಖರೀದಿಯನ್ನು ಆರಂಭಿಸಿದ್ದು ವರದಿ ಸಾಲಿನಲ್ಲಿ 2.36 ಕೋಟಿ ರೂಪಾಯಿ ಮೌಲ್ಯದ ರಬ್ಬರ್ ಹಾಲು ಮಾರಾಟ ಮಾಡಲಾಗಿರುತ್ತದೆಎಂದು ಅವರು ತಿಳಿಸಿದರು. ಉಪಾಧ್ಯಕ್ಷ ಅನಂತ ಭಟ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ನಿರ್ದೇಶಕರು ಉಪಸ್ಥಿತರಿದ್ದರು.ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರಿಕರಣ ಗೊಳಿಸಿ ಆನ್ಲೈನ್ ಮಾಡುವುದು, ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರಗಳನ್ನು ತೆರೆಯುವುದು, ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಕಟ್ಟಡ ರಚನೆ ಮಾಡುವುದು, ಸುಧಾರಿತ ಕೃಷಿ ಕ್ರಮವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ತಜ್ಞರಿಂದ ರೈತರ ತೋಟದಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು, ಮುಂಡಾಜೆಯಲ್ಲಿ ಖರೀದಿಸಿರುವ ನಿವೇಶನದಲ್ಲಿ ಸುಸಜ್ಜಿತ, ಕಾರ್ಖಾನೆ, ರಬ್ಬರ್ ಹಾಲು ಖರೀದಿ ಕೇಂದ್ರ, ಗೋದಾಮು ನಿರ್ಮಿಸುವ ಮೂಲಕ ಕೇಂದ್ರೀಕೃತ ವ್ಯವಸ್ಥೆ ಕೈಗೊಳ್ಳುವುದು ಮೊದಲಾದ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭೆಗೆ ತಿಳಿಸಲಾಯಿತು.






