ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 25ರಂದು ಬೆಳ್ತಂಗಡಿಯ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. 2023-24ನೇ ಸಾಲಿನ ವಾರ್ಷಿಕ ವರದಿಗೆ ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿತು. ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.ಕಳೆದ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ವಿಶೇಷ ಪ್ರೋತ್ಸಾಹ ನಿಧಿಯೊಂದಿಗೆ ಅಭಿನಂದಿಸಲಾಯಿತು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿ ಇತರ ಸಾಲಗಾರರಿಗೆ ಮಾದರಿಯಾದ, ಸಂಘದ ಬೆಳವಣಿಗೆಗೆ ಪೂರಕವಾಗಿ ಸಹಕರಿಸಿದ ಸಾಲಗಾರರನ್ನು ಗುರುತಿಸಿ, ಗೌರವಿಸಲಾಯಿತು. ಅಧ್ಯಕ್ಷ ಜಯಕೀರ್ತಿ ಜೈನ್ ಮಾತನಾಡಿ ಕಳೆದ 15ವರ್ಷಗಳಿಂದ ಸಂಘ ನಡೆದುಬಂದ ದಾರಿಯನ್ನು ವಿವರಿಸಿದರಲ್ಲದೇ; ಸಂಘದ ಬೆಳವಣಿಗೆಗೆ ಸಹಕರಿಸಿದ ಸರ್ವರನ್ನೂ ಕೃತಜ್ಞತೆಯಿಂದ ಸ್ಮರಿಸಿದರು.ಸಂಘದ ಸಲಹೆಗಾರ ವಸಂತ ಸುವರ್ಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಚಿದಾನಂದ ಹೂಗಾರ್ ಸ್ವಾಗತಿಸಿದರು. ನಿರ್ದೇಶಕ ಕೆ. ಚಂದ್ರಶೇಖರ್ ವಂದಿಸಿದರು. ಧರಣೇಂದ್ರ ಕೆ. ಜೈನ್ ಸಹಕರಿಸಿದರು. ನಿರ್ದೇಶಕರಾದ ಆರತಿ ಜೈನ್, ಜಯರಾಜ್ ಜೈನ್, ಅಬ್ದುಲ್ ರಝಾಕ್, ಹರಿಪ್ರಸಾದ್, ಪ್ರಶಾಂತ್ ಕುಮಾರ್, ವಾರಿಜಾ ಕೆ., ಹೇಮಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖೆಯ ಮೆನೇಜರ್ ಅತಿಶಯ ಜೈನ್, ಸಿಬ್ಬಂದಿ ವಿಶಾಲ ಮತ್ತಿತರರು ಉಪಸ್ಥಿತರಿದ್ದರು.






