ಧರ್ಮ ಸಂಸ್ಥಾಪನೆಗೆ ಆದ್ಯಾತ್ಮ ಶಕ್ತಿ ಜಾಗೃತವಾಗಬೇಕು-ಸದ್ಗುರು ಶ್ರೀ ಗಳು

ಧರ್ಮ ಸಂಸ್ಥಾಪನೆಗೆ ಆದ್ಯಾತ್ಮ ಶಕ್ತಿ ಜಾಗೃತವಾಗಬೇಕು-ಸದ್ಗುರು ಶ್ರೀ ಗಳು
Facebook
Twitter
LinkedIn
WhatsApp

ಬೆಳ್ತಂಗಡಿ: ಸುಖ ಶಾಂತಿ ಪಡೆಯಲು ತ್ಯಾಗದಿಂದ ಕರ್ಮ ಮಾಡಬೇಕು. ದೇಶದಲ್ಲಿ ಧರ್ಮ ಸಂಸ್ಥಾಪನೆಗಾಗಿ ಅಧ್ಯಾತ್ಮ ಶಕ್ತಿ ಜಾಗೃತವಾಗಬೇಕು. ತ್ಯಾಗದಿಂದ ಕೆಲಸ ಮಾಡುವವನು ಅಮೃತತ್ವ ಪಡೆಯುತ್ತಾನೆ. ಭಗವದ್ಭಕ್ತಿ ಮತ್ತು ಕರ್ಮಯೋಗದಿಂದ ಜಗತ್ ಕಲ್ಯಾಣ. ಅದೇ ಸನ್ಯಾಸಿಗಳ ಕಾರ್ಯ. ಪ್ರತಿಯೊಬ್ಬರೂ ಅವರವರ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ಆಚರಿಸುವ ಜ್ಞಾನ ಸತ್ರ ಮಾಡಬೇಕು. ನಾವು ಯಾರನ್ನೂ ದೂರದೇ ನಮ್ಮ ದಾರಿಯನ್ನು ನಾವು ಸೃಷ್ಟಿಸಿಕೊಳ್ಳಬೇಕು. ಸೇವೆಯೇ ಭಗವಂತನ ಸನಿಹಕ್ಕೆ ಹೋಗುವ ಸುಲಭ ಮಾರ್ಗ. ಸನಾತನ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಧರ್ಮಸ್ಥಳ ಕನ್ಯಾಡಿ ನಿತ್ಯಾನಂದನಗರ ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಸೆಪ್ಟೆಂಬರ್ 3ರಂದು ಶ್ರೀ ರಾಮಕ್ಷೇತ್ರದಲ್ಲಿ ತಮ್ಮ ಸದ್ಗುರು ಪಟ್ಟಾಭಿಷೇಕದ 16 ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು. ಮುಖ್ಯ ಅತಿಥಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವ ಮಾಂಕಾಳ್ ಎಸ್. ವೈದ್ಯ ಮಾತನಾಡಿ; ದೇಶದ ಉದ್ದಗಲದಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಿ, ಧರ್ಮ ಕಾರ್ಯ ನಡೆಸಿ ಮಾರ್ಗದರ್ಶನದಿಂದ ನಮ್ಮನ್ನು ಮುನ್ನಡೆಸುತ್ತಿರುವ ಗುರುಗಳ ಆಶೀರ್ವಾದ, ಮಾರ್ಗದರ್ಶನ ನಮಗೆ ಪ್ರೇರಣೆಯಾಗಿದೆ. ಎಲ್ಲರನ್ನು ಒಗ್ಗೂಡಿಸಿ ಶಿಷ್ಯಂದಿರು ಎತ್ತರಕ್ಕೆ ಬೆಳೆಯಲು ಗುರುಗಳ ಮಾರ್ಗದರ್ಶನದ ಅಗತ್ಯವಿದೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮತನಾಡಿ; ಸನಾತನ ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟ ಸ್ಥಾನವಿದೆ. ಗುರು ಎಂದರೆ ಬೆಳಕು. ಗುರುವಿನ ಚರಣಕ್ಕೆ ಬಂದವರಿಗೆ ಅಪೂರ್ವ ಶಕ್ತಿಯ ಸಿಂಚನವಾಗುವುದು. ಗುರು ಸೇವೆಯ ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ; ದೇಶ ನಿಂತಿದ್ದು ಸಂತರ ಮಾರ್ಗದರ್ಶನದಿಂದ. ಸರ್ವಧರ್ಮೀಯರ ಆಧ್ಯಾತ್ಮಿಕ ಕ್ಷೇತ್ರವಾಗಿ ಬೆಳಗಿ ಭಾರತ ಉಳಿದಿರುವುದು ಸಂತರ ತ್ಯಾಗ, ಬಲಿದಾನದಿಂದ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅರುಣ ನಾಯ್ಕ್ ಮಾತನಾಡಿ; ಭಟ್ಕಳ, ಹೃಷಿಕೇಶದಲ್ಲಿ ಶಾಖಾ ಮಠ ಸ್ಥಾಪಿಸಿದ ಶ್ರೀಗಳವರು ಅಯೋಧ್ಯೆಯಲ್ಲಿ ಮಠ ಸ್ಥಾಪಿಸಲು ಮುಂದಾಗಿದ್ದು, ಮುಂದೆ ಮಂತ್ರಾಲಯದಲ್ಲಿ ಶಾಖಾ ಮಠ ಪ್ರಾರಂಭಿಸಲಿ ಎಂದು ಶುಭ ಹಾರೈಸಿದರು. ಮಹೇಶ್ ಶಾಂತಿ ಮತ್ತು ಲೋಕೇಶ್ ಶಾಂತಿ ಅವರು ಶ್ರೀಗಳವರ ಪಟ್ಟಾಭಿಷೇಕ ವರ್ಧಂತಿಯ ವೈದಿಕ ವಿಧಿಗಳನ್ನು ನೆರವೇರಿಸಿ ಶ್ರೀಗಳವರ ಪಾದಪೂಜೆ, ರಜತ ಕಿರೀಟ ಧಾರಣೆ ನಡೆಸಿದರು. ಸಮಾರಂಭದಲ್ಲಿ ಅಯೋಧ್ಯೆಯ ಕೇಶವದಾಸ್ ಮಹಾರಾಜ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಭಟ್ಕಳ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ್, ಶ್ರೀ ರಾಮ ಕ್ಷೇತ್ರ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ವಾಮನ ನಾಯ್ಕ್ ಮಂಕಿ, ಆರ್‌.ಕೆ. ನಾಯ್ಕ್, ಸುಬ್ರಾಯ ನಾಯ್ಕ್, ಆರ್.ಜಿ. ನಾಯ್ಕ್ ಕುಮಟಾ, ಮಂಗಳೂರು ಕಾರ್ಪೊರೇಟರ್ ಕಿರಣ್ ಕುಮಾರ್, ಬೇಬಿ ಕುಂದರ್ ಬಂಟ್ವಾಳ, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿದರು. ಶ್ರೀ ರಾಮಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Latest 5

Related Posts