ಪೆರ್ಮುಡ ಕಂಬಳ – 130ಜೋಡಿ ಕೋಣಗಳು ಕನ್ಫರ್ಮ್

ಪೆರ್ಮುಡ ಕಂಬಳ – 130ಜೋಡಿ ಕೋಣಗಳು ಕನ್ಫರ್ಮ್
Facebook
Twitter
LinkedIn
WhatsApp

ಬೆಳ್ತಂಗಡಿ: ಬಿರು ಬಿಸಿಲಿನ ಬೇಗೆಯಲ್ಲಿ ತಂಪಾದ ಪರಿಸರದಲ್ಲಿ ಮಾರ್ಚ್ 21ರ ಶನಿವಾರ ನಡೆಯಲಿರುವ 33ನೇ ವರ್ಷದ ಐತಿಹಾಸಿಕ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಭಾಗವಹಿಸಲು ಈಗಾಗಲೇ 130 ಜೊತೆ ಕೋಣಗಳು ನೋಂದಾವಣೆಯಾಗಿದ್ದು; ಕೋಣಗಳ ವಿಶ್ರಾಂತಿಗೆ ಮಾಲೀಕರು ಜಾಗ ಕಾಯ್ದಿರಿಸಿಕೊಂಡಿದ್ದಾರೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷರು ಹಾಗೂ ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹೇಳಿದರು.ಅವರು ಮಾರ್ಚ್ 18ರಂದು ಬೆಳ್ತಂಗಡಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಛೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವೇಣೂರು ಪೆರ್ಮುಡ ಕಂಬಳದ ಬಗ್ಗೆ ವಿವರಣೆ ನೀಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ‌ ಕಂಬಳಗಳಲ್ಲಿ ಒಂದಾದ ಗ್ರಾಮೀಣ ಸೊಗಡಿನ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಈ ಹಿಂದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಸಮಿತಿಯ ಬೆನ್ನೆಲುಬಾಗಿ ನಿಂತು ಕಂಬಳ ನಡೆಸಲು ಧೈರ್ಯ ತುಂಬಿದವರು ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ವಸಂತ ಬಂಗೇರರು ಎಂದು ವಸಂತ ಬಂಗೇರ ಕಂಬಳಕ್ಕೆ ನೀಡಿದ ಅಗಾದ ಕೊಡುಗೆಯನ್ನು ನೆನಪಿಸಿದ ರಕ್ಷಿತ್ ಶಿವರಾಂ; ಇಂದು ಸಮಿತಿಯ ಸದಸ್ಯರೆಲ್ಲರ ಶ್ರಮದಿಂದ ಕಂಬಳ‌ ಮಾದರಿಯಾಗಿ ನಡೆಯುತ್ತಿದೆ ಎಂದರು.ಈ ಬಾರಿಯ ಕಂಬಳದಲ್ಲಿ ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಆಹಾರ ಮೇಳ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಸಂಪ್ರದಾಯದಂತೆ ಮಾರ್ಚ್ 21ರ ಬೆಳಿಗ್ಗೆ ಕಂಬಳವನ್ನು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿರುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ನಾಡಿನ ಖ್ಯಾತ ಟಿ.ವಿ. ನಿರೂಪಕಿ ರಾಧಾ ಹಿರೇಗೌಡರ್ ಉದ್ಘಾಟಿಸಲಿರುವರು. ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ರಮನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಅಶೋಕ್ ರೈ ಸಹಿತ ಗಣ್ಯಾತಿಗಣ್ಯರು ಭಾಗವಹಿಸಲಿರುವರು. ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ವಿಜೇತ ಕೋಣಗಳಿಗೆ ಚಿನ್ನದ ಪದಕಗಳ ಬಹುಮಾನಗಳನ್ನು ಈ ಹಿಂದಿನಂತೆಯೇ ಕೊಡಲು ಸಮಿತಿ ತೀರ್ಮಾನಿಸಿದೆ ಎಂದು ರಕ್ಷಿತ್ ಶಿವರಾಂ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಂಬಳದ ಸಂಚಾಲಕ ಪ್ರವೀಣ್ ಫರ್ನಾಂಡೀಸ್, ಸಮಿತಿಯ ಅಧ್ಯಕ್ಷ ನಿತೀಶ್ ಕುಮಾರ್, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಕೋಶಾಧಿಕಾರಿ ಅಶೋಕ್ ಪಾಣೂರು, ಉಪಾಧ್ಯಕ್ಷ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

Latest 5

Related Posts