ಬೆಳ್ತಂಗಡಿ: ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ನಿವೃತ್ತ ಯೋಧರಾದ ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ನಿವೃತ್ತ ಸಾಧಕ ಯೋಧ’ ಪ್ರಶಸ್ತಿಯನ್ನು ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿಯವರು ಪ್ರದಾನ ಮಾಡಿದರು. ಈ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲಿಗರು ಡಾ. ಗೋಪಾಲಕೃಷ್ಣ ಕಾಂಚೋಡು. ಆ ಪ್ರಯುಕ್ತ ಅವರನ್ನು ಉಜಿರೆಯ ಬೆನಕ ಹೆಲ್ತ್ ಸೆಂಟರ್ ವತಿಯಿಂದ ದಿನಾಂಕ ಮಾರ್ಚ್ 23ರಂದು ಆಸ್ಪತ್ರೆಯ ಆವರಣದಲ್ಲಿ ವೈದ್ರಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ದಂಪತಿಗಳು ಶಾಲು ಹೊದಿಸಿ, ಫಲಪುಷ್ಪ ಮತ್ತು ನೆನಪಿನ ಕಾಣಿಕೆಯಿತ್ತು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಡಾ| ಗೋಪಾಲಕೃಷ್ಣ ಕೆ ಇವರು ಮಾತನಾಡುತ್ತಾ; ಸೈನಿಕರು ನಿವೃತ್ತರಾದರೂ ದೇಶದ ಆಸ್ತಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ನಿವೃತ್ತ ಸಾಧಕ ಯೋಧ ಪ್ರಶಸ್ತಿಗೆ ಭಾಜನರಾದ ಗೋಪಾಲಕೃಷ್ಣ ಕಾಂಚೋಡು ಅವರನ್ನು ಸಮ್ಮಾನಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಮತ್ತು ಅವರ ಸೇವೆ ನಮ್ಮೆಲ್ಲರಿಗೂ ಪ್ರೇರೇಪಣೆಯಾಗಲಿ ಎಂದು ಆಶಿಸಿದರು .ಸನ್ಮಾನಿತರಾದ ಡಾ. ಗೋಪಾಲಕೃಷ್ಣ ಕಾಂಚೋಡು ಅವರು ಮಾತನಾಡುತ್ತಾ; ಜೀವನದಲ್ಲಿ ಯಾವುದೇ ಸಾಧನೆ ಮಾಡುವಲ್ಲಿ ನಮ್ಮ ಆಯ್ಕೆ, ಸವಾಲು ಎದುರಿಸುವ ಶಕ್ತಿ ಮತ್ತು ಸಂದರ್ಭದೊಂದಿಗೆ ಬದಲಾವಣೆ ಬಹು ಮುಖ್ಯವಾಗಿರುತ್ತದೆ. ಅಂಥವರು ಯಾವುದೇ ಸಾಧನೆ ಮಾಡಲು ಸಾಧ್ಯ. ಬೆನಕ ಆಸ್ಪತ್ರೆಯ ಡಾ| ಗೋಪಾಲಕೃಷ್ಣ ಅವರಲ್ಲಿ ಈ ಮೂರು ಗುಣಗಳು ಮೈಗೂಡಿಕೊಂಡಿವೆ. ಹಾಗಾಗಿ ಉಜಿರೆಯಂಥ ಗ್ರಾಮೀಣ ಪ್ರದೇಶದಲ್ಲಿ ಇಂಥ ದೊಡ್ಡ ಆಸ್ಪತ್ರೆ ಕಟ್ಟಲು ಸಾಧ್ಯವಾಯಿತೆಂದು ಹೇಳುತ್ತ ಅವರ ಸಿಬ್ಬಂದಿಗಳಲ್ಲೂ ಸೇವಾ ಮನೋಭಾವವನ್ನು ಗುರುತಿಸಿದ್ದೇವೆ ಎಂದು ಪ್ರಶಂಸಿಸಿ, ಬೆನಕ ಆಸ್ಪತ್ರೆ ಇನ್ನಷ್ಟು ಯಶಸ್ಸು ಸಾಧಿಸಲೆಂದು ಶುಭ ಹಾರೈಸಿದರು .ಡಾ| ಭಾರತಿ ಜಿ.ಕೆ ಇವರು ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು . ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ. ಭಟ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.







