
ಬೆಳ್ತಂಗಡಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳಿಗೆ ಪರದಾಡಬೇಕಾದ ಸಂದಿಗ್ಧ ಸ್ಥಿತಿ ಬಂದೊದಗಿದೆ. ಇದರಲ್ಲೂ ಸಿರಿವಂತರು ಹೇಗಾದರೂ ನಿಭಾಯಿಸುತ್ತಾರೆ. ಬಡವರಿಗೆ ಬಿಪಿಎಲ್ ಪಡಿತರ ಯೋಜನೆಯ ಮೂಲಕ ಸರಕಾರದ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳಿವೆ. ಇಂದು ನಿಜವಾಗಿ ಹೆಚ್ಚು ಸಂಕಷ್ಟಕ್ಕೊಳಗಾಗಿರುವವರು ನಾಡಿನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಕುಟುಂಬಿಕರು ಎಂದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅಭಿಪ್ರಾಯಿಸಿದರು.
ಅವರು ಎಪ್ರಿಲ್ 13ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಪತ್ರಕರ್ತರಿಗೆ ಆಹಾರ ಧಾನ್ಯಗಳ ಕಿಟ್ ಹಸ್ತಾಂತರಿಸಿ ಅನೌಪಚಾರಿಕವಾಗಿ ಮಾತನಾಡುತ್ತಿದ್ದರು. ಇತ್ತೀಚೆಗೆ ತಾಲೂಕಿನ ನಡ ಹಾಗೂ ಮುಂಡೂರು ಗ್ರಾಮಗಳಲ್ಲಿ ಪಡಿತರ ಕಿಟ್ ವಿತರಿಸಿದಾಗ ಅಲ್ಲಿನ 95%ಕ್ಕಿಂತ ಹೆಚ್ಚಿನ ಕುಟುಂಬಿಕರು ಸ್ಥಳಕ್ಕೆ ಬಂದು ಕಿಟ್ ಸ್ವೀಕರಿಸಿದ್ದಾರೆ. ಇಲ್ಲಿ ಬಡವ ಹಾಗೂ ಮಧ್ಯಮವರ್ಗ ಎಂಬ ಭೇದವೇ ಇರಲಿಲ್ಲ. ಪಾಪ, ಮಧ್ಯಮವರ್ಗದವರಿಗೆ ಹೇಳಲಾಗದ ಅನುಭವಿಸಲಾಗದ ಸಂಕಷ್ಟವಿದೆ ಎಂದ ಹರೀಶ್ ಕುಮಾರ್; ಸರಕಾರ ಈ ಸಂಕಷ್ಟದ ಸಮಯದಲ್ಲಿ ಆಹಾರಧಾನ್ಯವನ್ನು ಎಲ್ಲ ವರ್ಗದ ಜನತೆಗೆ ಉಚಿತವಾಗಿ ವಿತರಿಸಬೇಕು ಎಂದು ಅಭಿಪ್ರಾಯಿಸಿದರು. ಆಹಾರಧಾನ್ಯದ ಕಿಟ್ ಸ್ವೀಕರಿಸಿದ ಪತ್ರಕರ್ತರು, ತಮ್ಮ ಬಗ್ಗೆ ಕಾಳಜಿ ತೋರಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರರಿಗೆ ಕೃತಜ್ಞತೆ ಸಲ್ಲಿಸಿದ ಸಂದರ್ಭ ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಸಮಸ್ಯೆ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿದೆ ಎನ್ನುವುದನ್ನು ಹರೀಶ್ ಕುಮಾರ್ ವಿವರಿಸಿದರು. ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಯುವ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಕೌಟ್-ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯವರು ತಾಲೂಕಿನ ಪತ್ರಕರ್ತರಿಗೆ ಮತ್ತು ಪೊಲೀಸರಿಗೆ ಕೊಡಮಾಡಿದ ಮಾಸ್ಕ್ ಗಳನ್ನು ಪತ್ರಕರ್ತರ ಪರವಾಗಿ ಸಂಘದ ಕಾರ್ಯದರ್ಶಿ ಮನೋಹರ್ ಬಳಂಜ ಹಾಗೂ ಪೊಲೀಸರ ಪರವಾಗಿ ಬೆಳ್ತಂಗಡಿಯ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಸ್ವೀಕರಿಸಿದರು. ಸ್ಕೌಟ್-ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ, ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಮತ್ತಿತರರು ಹಾಜರಿದ್ದರು.








