ಪಟ್ರಮೆ-8 ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಯೇ ಇಲ್ಲ

ಪಟ್ರಮೆ-8 ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಯೇ ಇಲ್ಲ
Facebook
Twitter
LinkedIn
WhatsApp

ಕೆಲವೊಂದು ಕಾನೂನಿನ ತೊಡಕಿನಲ್ಲಿ ಮನೆ ನಂಬರ್ , ರೇಷನ್ ಕಾರ್ಡು ವಂಚಿತ ಕುಟುಂಬಗಳು
ಲಾಕ್ ಡೌನ್ ನ ಪರಿಸ್ಥಿತಿಯಲ್ಲಿ ಸರಕಾರದ ಪಡಿತರ ಪಡೆಯಲೂ ವಿಫಲವಾದ ಕುಟುಂಬಗಳು
ವಿಶೇಷ ವರದಿ: ಗುರುಮೂರ್ತಿ.ಎಸ್.ಕೊಕ್ಕಡ.

ಕೊಕ್ಕಡ: ಪಟ್ರಮೆ ಗ್ರಾಮದ ಅನಾರು ಭಾಗದ ಸುಮಾರು ಏಳೆಂಟು ಕುಟುಂಬಗಳು ಜೀವನಾಧಾರವಾದ ಮೂಲಭೂತ ಅವಶ್ಯಕತೆಯ ಪಡಿತರ ಚೀಟಿಯಿಲ್ಲದ ಸ್ಥಿತಿಯಲ್ಲಿದ್ದು ಇದೀಗ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಈ ಕುಟುಂಬಗಳ ಸದಸ್ಯರಿಗೆ ಸರಕಾರದಿಂದ ನೀಡಲ್ಪಡುವ ಪಡಿತರ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ.ಒಂದೊಂದು ಕುಟುಂಬಗಳ ಕಥೆಯೂ ತೀರಾ ವಿಭಿನ್ನ. ಸುಮಾರು ಹತ್ತಾರು ವರ್ಷಗಳಿಂದ ಸ್ವಂತ ಮನೆಯೂ ಇಲ್ಲದೆ ಸರಕಾರಿ ಸ್ಥಳದಲ್ಲಿ, ಸರಕಾರೀ ಸ್ಥಳವೂ ಇಲ್ಲದ ಕೆಲವು ಹತಭಾಗ್ಯರು ಅರಣ್ಯದ ವ್ಯಾಪ್ತಿಯಲ್ಲಿ ತಮ್ಮ ಹಿಂದಿನ ತಲೆಮಾರಿನವರು ವಾಸಿಸುತ್ತಿದ್ದರೆನ್ನುವ ಭರವಸೆಯಲ್ಲಿ ಅರಣ್ಯ ವ್ಯಾಪ್ತಿಯಲ್ಲೂ ಮನೆಕಟ್ಟಿ ಕುಳಿತ ಈ ಕುಟುಂಬಗಳಿಗೆ ಸರಕಾರದಿಂದ ಲಭಿಸುವ ಎಲ್ಲಾ ಮುಲಭೂತ ಸೌಲಭ್ಯಗಳೂ ವಂಚಿತರಾಗಿ ದಿನಗಳೆಯುತ್ತಿದ್ದಾರೆ. ಈ ಭಾಗದ ಗ್ರಾ.ಪಂ. ಸದಸ್ಯರನ್ನು ಜೈ ಕನ್ನಡಮ್ಮ ಪತ್ರಿಕೆ ಈ ಕುರಿತು ವಿಚಾರಿಸಿದಾಗ ಈಗಾಗಲೇ ಸಾಕಷ್ಟು ಸಲ ಗ್ರಾ.ಪಂ. ಸಭೆಗಳಲ್ಲಿ ಈ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕೆನ್ನುವ ಪ್ರಯತ್ನಗಳನ್ನು ಮಾಡಲಾಗಿತ್ತಾದರೂ ಮನೆ ನಂಬರ್ ಇಲ್ಲದ ಕಾರಣದಿಂದ ಪಡಿತರ ಚೀಟಿ ಸಿಗದೆ ಉಳಿದಿರುತ್ತದೆ.
ಪಡಿತರ ಚೀಟಿ ಇಲ್ಲದೆ ಇಷ್ಟೂ ಕುಟುಂಬಗಳ ಮನೆಯ ಶಾಲೆಗೆ ಹೋಗುವ ಮಕ್ಕಳಿಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳೂ ಸಿಗದೇ ಇರಲು ಪಡಿತರ ಚೀಟಿ ಇಲ್ಲದಿರುವುದೇ ಕಾರಣವಾಗಿದೆ.ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಲೆಕುಡಿಯ ಜನಾಂಗದವರು ತಮ್ಮ ಹಿಂದಿನ ತಲೆಮಾರು ಕೂಡಾ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂದು ಸರಕಾರಕ್ಕೆ ತಕ್ಕ ದಾಖಲೆ ನೀಡಲು ಯಾವುದೂ ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳದ ಅವಿದ್ಯಾವಂತರಾಗಿ ಬಾಕಿ ಉಳಿದಿದ್ದಾರೆ. ತಮ್ಮ ಹಿಂದಿನವರು ವಾಸಿಸುತ್ತಿದ್ದ ಸಂದರ್ಭ ಅವರು ನೆಟ್ಟು ಪೋಷಿಸಿದ ಉಪಯುಕ್ತ ಗಿಡ ಮರಗಳನ್ನು ಮಾತ್ರ ನಾವು ಸಾಕ್ಷಿಯಾಗಿ ದಾಖಲೆ ತೋರಿಸಬಹುದಲ್ಲದೇ ಸ್ಥಳೀಯಾಡಳಿತದಿಂದ ಈ ಬಗ್ಗೆ ದಾಖಲೆ ಪಡಕೊಳ್ಳಲೂ ನಮಗೆ ಅರಿಯದು ಎನ್ನುವುದೇ ಇಲ್ಲಿ ಇವರುಗಳ ವಾಸದ ಮನೆಯನ್ನು ಸಕ್ರಮಗೊಳಿಸಲು ಕಾನೂನಾತ್ಮಕ ತೊಡಕು ಉಂಟಾಗಿರುವುದು. ಇನ್ನು ಈ ಭಾಗದಲ್ಲಿ ಸರಕಾರಿ ಸ್ಥಳಗಳಲ್ಲಾದರೂ ಈ ನೆಲೆ ಇಲ್ಲದ ಕುಟುಂಬಗಳು ಮನೆ ಕಟ್ಟಬಹುದಿತ್ತು ಎಂದರೆ ಗ್ರಾಮದ ಬಹುತೇಕ ಸರಕಾರಿ ಭೂಮಿಗಳನ್ನು ದಶಕದ ಹಿಂದಿನಿಂದಲೇ ಸ್ಥಳೀಯ ಭೂಮಾಲಿಕರುಗಳು ಬೇಲಿ ಹಾಕಿ ಇಟ್ಟುಕೊಂಡಾಗಿದೆ. ಇದರಲ್ಲೂ ಬಹುತೇಕ ಸರಕಾರಿ ಭೂಮಿಗಳನ್ನ ತಮ್ಮ ಕುಟುಂಬದ ಸದಸ್ಯರುಗಳೆಲ್ಲರ ಹೆಸರಿನಲ್ಲಿ ಅಷ್ಟು ಇಷ್ಟು ಅಕ್ರಮ ಸಕ್ರಮ ದಾಖಲೆ ಮಾಡಿಕೊಂಡಿದ್ದರೂ ಇನ್ನೂ ಹಲವಾರು ಎಕ್ರೆ ಸ್ಥಳ ಗ್ರಾಮದಲ್ಲಿ ಸರಕಾರಿ ದಾಖಲೆಯಲ್ಲೆ ಉಳಿದದ್ದೂ ಇದೆ. ಈಗಾಗಲೇ ಗ್ರಾಮದ ಅತಿಕ್ರಮಿತ ಸರಕಾರಿ ಭೂಮಿಗಳನ್ನು ಗುರುತಿಸಿ ಈ ಮನೆ ಮಠ ಇಲ್ಲದ ಅತಂತ್ರ ಸ್ಥಿತಿಯಲ್ಲಿರುವ ಅರ್ಹ ಕುಟುಂಬಗಳಿಗೆ ಹಂಚಲು ಜಿಲ್ಲಾಡಳಿತ ಮತ್ತು ತಾಲೂಕು ಕಂದಾಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.

ಸರಕಾರಿ ಸ್ಥಳದಲ್ಲೂ ಮನೆ ಕಟ್ಟಿ ಕುಳಿತ ಐದಾರು ಕುಟುಂಬಗಳಿಗೂ ಇನ್ನೂ ಪಡಿತರ ಚೀಟಿ ಇಲ್ಲ;
ಮನೆಕಟ್ಟಲು ಸ್ಥಳವೇ ಇಲ್ಲದೆ ಅರಣ್ಯ ಭಾಗದಲ್ಲಿ ಮನೆಕಟ್ಟಿ ಕುಳಿತವರ ಸಂಕಷ್ಟ ಈ ರೀತಿಯಾದರೆ ಇನ್ನು ಸರಕಾರಿ ಸ್ಥಳದಲ್ಲಿ ಮನೆಕಟ್ಟಿ ಕುಳಿತವರಿಗೂ ಮನೆ ನಂಬರ್ ನೀಡಲು ಸಾಧ್ಯವಾಗದೆ ಉಳಿದ ಐದಾರು ಕುಟುಂಬಗಳೂ ಪಡಿತರ ಚೀಟಿಯಿಂದ ವಂಚಿತವಾಗಿದೆ. ಸರಕಾರಿ ಸ್ಥಳದಲ್ಲಿ ಹಲವು ವರ್ಷಗಳಿಂದ ಮನೆ ಮಾಡಿರುವವರಿಗೆ ಹಕ್ಕು ಪತ್ರ ಸರಕಾರದ ಕಡೆಯಿಂದೆ ನೀಡಿಲ್ಲ. ಹಕ್ಕುಪತ್ರ ಇಲ್ಲದೆ ಮನೆ ನಂಬರ್ ಇಲ್ಲ. ಮನೆ ನಂಬರ್ ಇಲ್ಲದೆ ಆಧಾರ್ ಇಲ್ಲ, ಚುನಾವಣಾ ಗುರುತು ಪತ್ರ ಇಲ್ಲ, ಪಡಿತರ ಚೀಟಿಯೂ ಇಲ್ಲ. ಸರಳವಾದ ವ್ಯವಸ್ಥೆಯೊಳಗೆ ಈ ಎಲ್ಲಾ ಪಟ್ರಮೆ ಗ್ರಾಮದ ಪಡಿತರ ವಂಚಿತ ಕುಟುಂಬಗಳಿಗೆ ತಕ್ಷಣ ಜಿಲ್ಲಾಡಳಿತದಿಂದ ಇತರರಿಗೆ ನೀಡಿದಂತೆ ಪಡಿತರ ವಸ್ತುಗಳನ್ನು ತಾತ್ಕಾಲಿಕವಾಗಿ ಒದಗಿಸಬೇಕು ಎನ್ನುವುದು ಈ ಭಾಗದ ಪಡಿತರ ವಂಚಿತರ ಬೇಡಿಕೆ. 1 ನೇ ವಾರ್ಡಿನ ಸದಸ್ಯ ಶ್ಯಾಮರಾಜ್ ಪಟ್ರಮೆ ಮತ್ತು ಇನ್ನಿತರ ಸಂಘಗಳ ಮೂಲಕ ಕೆಲವೊಂದು ಅಗತ್ಯ ವಸ್ತುಗಳು ಈ ಕುಟುಂಬಗಳಿಗೆ ಲಭಿಸಿದೆ. ಸರಕಾರದ ಕಡೆಯಿಂದ ಇಂತಹ ತುರ್ತು ಪರಿಸ್ಥಿತಿಯಲ್ಲಿ ಈ ವರೆಗೂ ಸ್ಪಂದನೆ ಇರುವುದಿಲ್ಲ.
ಗ್ರಾಮದ ವಂಚಿತರಿಗೆಲ್ಲರಿಗೂ ಶೀಘ್ರ ಪಡಿತರ ಚೀಟಿ ಲಭಿಸುವಂತಾಗಲಿ ; ಜೈ ಕನ್ನಡಮ್ಮ ದ ಆಶಯ:
ಪಟ್ರಮೆ ಗ್ರಾಮದ 1 ನೇ ವಾರ್ಡಿನಲ್ಲಿ ಅಂದಾಜು 9 ಕುಟುಂಬಗಳಿಗೆ ಪಡಿತರ ಚೀಟಿ ಅಲಭ್ಯವಿದೆ. ಪಟ್ರಮೆ ಗ್ರಾಮದ ಕೃಷ್ಣಪ್ಪ ಬಿನ್ ಬಟ್ಯ ಕುರುಂದ, ಮೋನಪ್ಪ ಬಿನ್ ಬಾಬು ಪರಪ್ಪೆ, ರಾಮಣ್ಣ ಬಿನ್ ಶೀನ ಪಚ್ಚೆಮಿ, ಚೀಂಕ್ರ ಬಿನ್ ದೆಯ್ಯು ಪೆಂರ್ಬುಡ, ಚೋಮ ಬಿನ್ ಐತ್ತ ಪಚ್ಚೆಮಿ, ಅಣ್ಣಿ ಬಿನ್ ಚಂರ್ಬ ಕಟ್ಟದ ಬೈಲು, ಗಿರಿಜ ಕೋಂ ಬಾಲಕೃಷ್ಣ ಮೈಕೆg, ವಸಂತ ಎಂ.ಕೆ. ರಾಮಕೋಡಿ, ಬಾಬು ಎಂ.ಕೆ. ಬಿನ್ ಮಾಂಕು ಎಂ.ಕೆ. ಡಾಗಂಡ ಇವಿಷ್ಟು ಮೇಲ್ನೋಟಕ್ಕೆ ಪಡಿತರ ಚೀಟಿ ವಂಚಿತರಾಗಿರುವವರ ವಿವರ. ಕೂಲಂಕುಶವಾಗಿ ಇನ್ನೂ ಪರಿಶೀಲಿಸಿದಲ್ಲಿ ಇನ್ನೂ ಹತ್ತಾರು ಕುಟುಂಬಗಳೂ ಈ ಗ್ರಾಮದಲ್ಲಿ ಸಿಗಲೂ ಬಹುದು. ಈ ಎಲ್ಲ ಪಡಿತರ ವಂಚಿತರಾಗಿರುವುದಕ್ಕೆ ಕಾರಣಗಳು ಪ್ರತ್ಯೇಕವಾಗಿಯೂ ಇರಬಹುದು., ಇಚ್ಛಾಶಕ್ತಿಯುಳ್ಳ ದಕ್ಷ ಅಧಿಕಾರಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ರವರ ಮೂಲಕ ಈ ಎಲ್ಲಾ ಕುಟುಂಬಗಳಿಗೆ ಪಡಿತರ ಚೀಟಿ ಒದಗುವಂತಾಗಲಿ ಎನ್ನುವುದು ಜೈ ಕನ್ನಡಮ್ಮ ಪತ್ರಿಕೆಯ ಹಾರೈಕೆ. ಅಂತೆಯೇ ಸರಕಾರಿ ಭೂಮಿಗಳು ಎಕರೆ ಗಟ್ಟಳೆ ಗ್ರಾಮದಲ್ಲಿ ಒತ್ತುವರಿಯಾಗಿರುವುದನ್ನು ಗುರುತಿಸಿ ಈ ಅರ್ಹರೆಲ್ಲರಿಗೂ ಸ್ವಂತ ಮನೆಕಟ್ಟಿ ವಾಸಿಸಲು ತಾಲೂಕಾಡಳಿತ , ಜಿಲ್ಲಾಡಳಿತಗಳ ಕ್ಷಿಪ್ರ ಸ್ಪಂದನೆಯೂ ಲಭಿಸಲಿ.

Latest News

Related Posts