ದೇಶದಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೃಢ ಸಂಕಲ್ಪ ತೊಟ್ಟಿದ್ದು; ಲಾಕ್ ಡೌನಿನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶದ 90%ಜನತೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಕೈಜೋಡಿಸಿದ್ದು; ರಾಷ್ಟ್ರ ಸಂಕಷ್ಟವನ್ನೆದುರಿಸುವಾಗ ನಮ್ಮ ಅಭಿಪ್ರಾಯ ಭೇದಗಳನ್ನು ಬದಿಗಿರಿಸಿ, ಮನುಕುಲದ ವೈರಿಯಾದ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಒಂದಂಶದ ಕಾರ್ಯಕ್ರಮದಲ್ಲಿ ಸರಕಾರದ ಜೊತೆಗಿರಲು ತೀರ್ಮಾನಿಸಿದ್ದಾರೆ. ದೇಶದ ನಾಗರಿಕರ ಈ ಮೌಲ್ಯಾಧಾರಿತ ನಡೆಯನ್ನೇ ಆಡಳಿತಾರೂಢ ಪಕ್ಷದ ಕೆಲ ಮರಿಪುಢಾರಿಗಳು ತಮಗೆ ಹಾಗೂ ತಮ್ಮ ಪಕ್ಷಕ್ಕೆ ನೀಡಿದ ಬೆಂಬಲ ಎಂದು ಭ್ರಮಿಸಿ; ಲಾಕ್ ಡೌನ್ನಿನ ನಡುವೆಯೂ ಹಾಲು ಸಹಿತ ಸರಕಾರ ನೀಡುವ ದಿನಬಳಕೆಯ ವಸ್ತುಗಳ ವಿತರಣೆಯನ್ನು ಮಾಸ್ಕ್ ಧರಿಸಿ ಮುಂಜಾಗ್ರತೆ ತೆಗೆದುಕೊಳ್ಳದೇ-ಸಾಮಾಜಿಕ ಅಂತರವನ್ನೂ ಕಾಪಾಡದೇ ಉದ್ಘಾಟಿಸುವ ಮೂಲಕ ತಮ್ಮ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ‘ಮೀನು ಹಿಡಿಯುವುದು ನೀರಲ್ಲಿ ಮಾತ್ರ’ ಎಂಬ ಕಿವಿಮಾತು ಹೇಳಬಯಸುತ್ತೇನೆ.
ಇನ್ನು ಲಾಕ್ ಡೌನಿನಿಂದಾಗಿ ದೇಶ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದೆ ಎಂಬುದು ಸ್ಪಷ್ಟ. ದೇಶದ ಉತ್ಪಾದನೆ ಶೂನ್ಯ, ಇನ್ನೊಂದೆಡೆ ಕೊರೋನಾ ವಿರುದ್ಧ ಹೋರಾಡಲು ಸಂಪನ್ಮೂಲ ಹೊಂದಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಲಾಕ್ ಡೌನಿನಿಂದಾಗಿ ಜನರಿಗೂ ಕೆಲಸವಿಲ್ಲ; ಪರಿಣಾಮ ಆದಾಯ ಶೂನ್ಯ. ಬಡ, ಕೆಳ ಮಧ್ಯಮ ಮಾತ್ರವಲ್ಲ; ಇದೀಗ ಮಧ್ಯಮವರ್ಗದವರೂ ದಿನಬಳಕೆಯ ವಸ್ತುಗಳ ಖರೀದಿಗೆ ಪರಿತಪಿಸುವಂತಾಗಿದೆ. ಒಟ್ಟಿನಲ್ಲಿ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ದೇಶದ ಆರ್ಥಿಕ ಸ್ಥಿತಿ ಸಾಧಾರಣೆಗೆ ಕೇಂದ್ರ ಸರಕಾರ ಹೆಲಿಕಾಪ್ಟರ್ ಮನಿಯ ಮೊರೆ ಹೋಗಲು ಚಿಂತಿಸುತ್ತಿದೆ ಎಂಬ ಮಾಹಿತಿ ಧೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಸಾಮಾನ್ಯವಾಗಿ ದೇಶದ ರಿಸರ್ವ್ ಬ್ಯಾಂಕಿಗೆ ಕೇಂದ್ರ ಸರಕಾರ ಸಾಕಷ್ಟು ಭದ್ರತೆ ಒದಗಿಸಿ, ಅಷ್ಟೇ ಮೌಲ್ಯದ ನೋಟು ಮುದ್ರಿಸಲು ಆದೇಶಿಸಬೇಕು. ಉದಾಹರಣೆಗೆ 1ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸುವಂತೆ ಕೇಂದ್ರ ಸರಕಾರ ಭಾರತೀಯ ರಿಸರ್ವ್ ಬ್ಯಾಂಕಿಗೆ ಆಧೇಶಿಸಬೇಕಾದರೆ, ಕೇಂದ್ರ ಸರಕಾರ ಅಷ್ಟೇ ಮೌಲ್ಯದ ಚಿನ್ನವನ್ನು ರಿಸರ್ವ್ ಬ್ಯಾಂಕಿಗೆ ಭದ್ರತೆಯಾಗಿ ಒದಗಿಸಬೇಕು. ಆಗ ಮಾತ್ರ ದೇಶದಲ್ಲಿ ರೂಪಾಯಿ ತನ್ನ ಮೌಲ್ಯ ಉಳಿಸಿಕೊಂಡು, ಹಣದುಬ್ಬರ ತಡೆಯಲು ಸಾಧ್ಯ. ಇದೀಗ ಇಂದಿನ ಸಂಕಷ್ಟದ ದಿನಗಳಲ್ಲಿ ಒಮ್ಮೆಗೆ ಜನತೆಯಲ್ಲಿ ಹಣಕಾಸು ತಿರುಗುವಂತೆ ಮಾಡಲು ಸೂಕ್ತ ಭದ್ರತೆ ಒದಗಿಸದೇ ಒಂದಷ್ಟು ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಲು ರಿಸರ್ವ್ ಬ್ಯಾಂಕಿಗೆ ಸೂಚಿಸಲು ಕೇಂದ್ರ ಸರಕಾರ ಮುಂದಾಗಿದೆಯಂತೆ. ಇದು ಹೌದಾದಲ್ಲಿ ತುಘಲಕ್ ದರ್ಬಾರಿಗೆ ಇದಕ್ಕತ ಉತ್ತಮವಾದ ಬೇರೆ ಉದಾಹರಣೆ ಸಿಗಲಾರದು. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ, ಉತ್ಪಾದನೆ ಕುಸಿತವಾಗಿ, ನೋಟುಗಳೇ ರಾರಾಜಿಸುವ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾದೀತು. ಯಾವುದೇ ಸಂಸರ್ಭದಲ್ಲಿ ಜನಸಾಮಾನ್ಯರಲ್ಲಿ ಹಣವಿಲ್ಲವೆಂದಾಗಲೆಲ್ಲಾ ಕೇಂದ್ರ ಸರಕಾರ ಮನಬಂದಂತೆ ನೋಟು ಪ್ರಿಂಟ್ ಮಾಡಿದರೆ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುವುದರಲ್ಲಿ ಅನುಮಾನವೇ ಬೇಡ. ಕೇಂದ್ರ ಸರಕಾರ ಈ ಹೆಲಿಕಾಪ್ಟರ್ ಮನಿಯ ಬಗ್ಗೆ ಇನ್ನೊಮ್ಮೆ ಚಿಂತಿಸಿ, ಮುಂದಡಿಯಿಡುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.










