ಸೂರು ಕುಸಿಯುವ ಭೀತಿಯಲ್ಲಿ ಪಟ್ರಮೆಯ ಬಡ ಕುಟುಂಬ: ಸಣ್ಣ ಮಕ್ಕಳೊಂದಿಗೆ ಅಸಹಾಯಕ ತಾಯಿ

ಸೂರು ಕುಸಿಯುವ ಭೀತಿಯಲ್ಲಿ ಪಟ್ರಮೆಯ ಬಡ ಕುಟುಂಬ: ಸಣ್ಣ ಮಕ್ಕಳೊಂದಿಗೆ ಅಸಹಾಯಕ ತಾಯಿ
Facebook
Twitter
LinkedIn
WhatsApp

ಕೊಕ್ಕಡ, ಎ.16: ಪಟ್ರಮೆ ಗ್ರಾಮದ ಅನಾರು ಸಮೀಪದ ಮೈಕೆ ಎಂಬಲ್ಲಿ ಗಿರಿಜ ಗೌಡ ಎಂಬವರ ಬಡ ಕುಟುಂಬವು ಮಳೆಗಾಲವನ್ನು ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿದೆ.
ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಾರು ಸಮೀಪದ ಮೈಕೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಕೆಲವು ವರ್ಷಗಳಿಂದ ಗುಡಿಸಲು ರೀತಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ, ಸಣ್ಣ ಸಣ್ಣ ಮಕ್ಕಳೊಂದಿಗೆ ತೀರಾ ಬಡತನದಲ್ಲಿದೆ. ಈ ಕುಟುಂಬಕ್ಕೆ ಸರಕಾರೀ ಜಾಗದಲ್ಲಿ ಮನೆ ಕಟ್ಟಿರುವುದರಿಂದ ಮನೆ ನಂಬ್ರ ಕೊಡಲಾಗುತ್ತಿಲ್ಲ, ಮನೆ ನಂಬ್ರ ಸಿಗದೇ ಪಡಿತರ ಚೀಟಿ ಇಲ್ಲ. ಬಡವರಿಗೆ ಸಿಗಬೇಕಾದ ಯಾವ ಸೌಲಭ್ಯವೂ ಇವರಿಗೆ ಸಿಗಲು ತಾಂತ್ರಿಕ ತೊಂದರೆಗಳು ಅಡ್ಡಿಬರುತ್ತಿದೆ. 8ನೇ ತರಗತಿಯಲ್ಲಿ ಓದುವ ಹುಡುಗ, 4ನೇ ತರಗತಿಯಲ್ಲಿ ಕಲಿಯುವ ಹುಡುಗಿ ಹಾಗೂ ಅಂಗನವಾಡಿ ಗೆ ಹೋಗುವ ಸಣ್ಣ ಮಕ್ಕಳು ಇರುವ ಈ ಕುಟುಂಬಕ್ಕೆ ಕೂಲಿ ಮಾಡಿಯೇ ಸಂಸಾರ ಸಾಗಿಸಬೇಕಾದ ದುಸ್ಥಿತಿ. 4 ಕಂಬಗಳನ್ನು ಹಾಕಿ ಸೋಗೆಯ ಮಾಡು ಮಾಡಿ ಗುಡಿಸಿಲಿನಾಕೃತಿಯ ಮನೆಯಲ್ಲಿ ಗಾಳಿ ಮಳೆ, ಚಳಿಗೆ ದೇವರೇ ರಕ್ಷಣೆ ಎಂಬಂತಾಗಿದೆ ಈ ಕುಟುಂಬಕ್ಕೆ. ಕಳೆದ ಒಂದು ತಿಂಗಳಿಂದ ಕೂಲಿಯೂ ಇಲ್ಲದೇ ಇತ್ತ ಸರಕಾರದ ರೇಷನ್ ಕೂಡಾ ವಂಚಿತವಾಗಿ ಈ ಕುಟುಂಬ ನರಕಯಾತನೆ ಅನುಭವಿಸುತ್ತಿದೆ. ಇದನ್ನು ಗಮನಿಸಿದ ಒಂದೆರಡು ಸಂಘ ಸಂಸ್ಥೆಗಳು ಅಕ್ಕಿ ಹಾಗೂ ಅವಶ್ಯಕ ದಿನಸಿ ಸಾಮಾಗ್ರಿಗಳನ್ನು ಒದಗಿಸದಿದ್ಗದಲ್ಲಿ ಉಪವಾಸವೇ ಗತಿ ಅನ್ನುವ ಪರಿಸ್ಥಿತಿ ಈ ಕುಟುಂಬಕ್ಕಾಗಿತ್ತು.
ಸೂರು ಜೀರ್ಣಾವಸ್ಥೆ: ಮಳೆ ಬಂದರೆ ನೀರೆಲ್ಲಾ ಒಳಗೆ:
ಇದೀಗ ಬಂದ ಒಂದೆರಡು ಮಳೆಗೆ ನೀರೆಲ್ಲಾ ಮನೆಯ ಒಳಗೆ ಬಿದ್ದಿದೆ. ಸೋಗೆಯ ಮಾಡು ಜೀರ್ಣಾವಸ್ಥೆಯಲ್ಲಿದ್ದು ಮಳೆಗಾಲದ ಗಾಳಿ ಮಳೆಗೆ ಕುಸಿಯುವ ಭೀತಿಯೂ ಇದೆ. ಅವಶ್ಯಕ ಸಾಮಾಗ್ರಿಗಳನ್ನು ಈ ಕುಟುಂಬಕ್ಕೆ ನೀಡಲು ತೆರಳಿದ ವೇಳೆ ಮೊಗೇರ ಸಮೃಧ್ಧಿ ಸೇವಾ ಸಂಘ ದಕ್ಷಿಣಕನ್ನಡ ಜಿಲ್ಲಾ ಸಂಘವು ಇದನ್ನು ಗಮನಿಸಿ ಯಾರಾದರೂ ದಾನಿಗಳು ಸಿಮೆಂಟ್ ಶೀಟ್ ಒದಗಿಸಿದಲ್ಲಿ ತಮ್ಮ ಸಂಘದ ಕಾರ್ಯಕರ್ತರು ಶ್ರಮದಾನದ ಮೂಲಕ ಸೂರು ನಿರ್ಮಿಸಿಕೊಡುವುದಾಗಿ ಜೈಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಹಿಂದೆಯೂ ತಮ್ಮ ಸಂಘದಿಂದಲೇ ಈ ತಾತ್ಕಾಲಿಕ ಮನೆ ನಿರ್ಮಾಣ ಆಗಿದೆ ಅನ್ನುವ ಮಾಹಿತಿ ಜೈಕನ್ನಡಮ್ಮ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಶಾಸಕರು ಗಮನಹರಿಸಿ:
ಸರಕಾರವು ಈ ಸಂದರ್ಬದಲ್ಲಿ ಬಡವರಿಗೆ ನೀಡುತ್ತಿರುವ ನೆರವು ದಯನೀಯ ಪರಿಸ್ಥಿತಿಯಲ್ಲಿರುವ ಈ ಕುಟುಂಬಕ್ಕೂ ಸಿಗಲಿ ಹಾಗೆಯೇ ಈ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸುವ ಬಗ್ಗೆ ಶಾಸಕರು ಮುಂದಾಗಲಿ ಅನ್ನುವುದು ಜೈಕನ್ನಡಮ್ಮ ಪತ್ರಿಕೆಯ ಆಶಯವಾಗಿದೆ.

ವಿಶೇಷ ವರದಿ: ಗುರುಮೂರ್ತಿ.ಎಸ್.ಕೊಕ್ಕಡ.

Latest News

Related Posts