ಕೊಕ್ಕಡ:
ಆಂಧ್ರಪ್ರದೇಶದ ಹೈದರಾಬಾದ್ ನ ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕಿದ್ದ ಕೊಕ್ಕಡ ಮುಂಡೂರುಪಳ್ಕೆ ಮೂಲದ ಓರ್ವ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಮನೆಗೆ ಮರಳಿದ್ದು ಮತ್ತು ಬೆಂಗಳೂರು ನಲ್ಲಿ ವಾಸವಿದ್ದ ಓರ್ವ ವ್ಯಕ್ತಿ ಶಿಶಿಲ ಗ್ರಾಮಕ್ಕೆ ಶುಕ್ರವಾರದಂದು ಬಂದಿದ್ದು ಈ ಎರಡೂ ವ್ಯಕ್ತಿಗಳ ಮಾಹಿತಿಯನ್ನು ಪತ್ತೆ ಹಚ್ಚಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಗ್ರಾ.ಪಂ. ನ ಕಾರ್ಯಪಡೆಗಳು ಇಬ್ಬರ ಮನೆಗೂ ತೆರಳಿ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ ಘಟನೆ ನಡೆದಿದೆ.
ಹೈದರಾಬಾದ್ ನಲ್ಲಿ ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಕೊಕ್ಕಡ ಗ್ರಾಮದ ತೆಂಕಬೈಲು ಎಂಬಲ್ಲಿಯ 45 ವರ್ಷದ ವ್ಯಕ್ತಿ ಎ.16 ರಂದು ಬೆಳಗ್ಗೆ ತನ್ನ ಮನೆಗೆ ಬಂದಿದ್ದ. ಈತ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಗ್ರಾ.ಪಂ. ಕಾರ್ಯಪಡೆಗೆ ಮಾಹಿತಿ ನೀಡಿದ್ದರು. ಇದರನ್ವಯ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿ ಶಿವಪ್ರಸಾದ್ , ಧರ್ಮಸ್ಥಳ ಪೋಲೀಸ್ ಠಾಣೆಯ ಹೆಚ್.ಸಿ. ರವೀಂದ್ರ , ಕೊಕ್ಕಡ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು ಅವರ ಮನೆಗೆ ಹೋಗಿ ವಿಚಾರಿಸಿ ಆತನಿಗೆ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ಗೆ ಒಳಪಡಿಸಿರುತ್ತಾರೆ. ಗುರುವಾರದಂದು ಇದೇ ವ್ಯಕ್ತಿ ಕೊಕ್ಕಡ ಸಿಂಡಿಕೇಟ್ ಬ್ಯಾಂಕಿಗೂ ಆಗಮಿಸಿದ್ದು ಇವರನ್ನು ಕಂಡವರು ಮಾಹಿತಿ ನೀಡಿದ್ದರು. ಈತ ಮನೆಗೆ ಬರುತ್ತಿರುವುದನ್ನು ತಿಳಿದ ಈತನ ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋಗಿರುವುದಾಗಿ ತಿಳಿದು ಬಂದಿದೆ. ಈತನಿಗೆ ಇದೀಗ 20 ದಿನಗಳ ಹೋಮ್ ಕ್ವಾರಂಟೈನ್ ವಿಧಿಸಲಾಗಿದ್ದು , ಈ ದಿನಗಳಲ್ಲಿ ಬೇಕಾದ ಆಹಾರ ಸಾಮಾಗ್ರಿಗಳನ್ನು ಸ್ಕ್ವಾಡ್ ವಿತರಿಸಲಿದೆ. ಈತ ಹೈದರಾಬಾದ್ ನಿಂದ ಕೊಕ್ಕಡಕ್ಕೆ ಹೇಗೆ ಬಂದ ಎಂದು ಅಧಿಕಾರಿಗಳು ವಿಚಾರಿಸಿದಾಗ ಕಂಪೆನಿಯವರೇ ವಾಹನದಲ್ಲಿ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈತನ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.
ಬೆಂಗಳೂರಿನಿಂದ ಶಿಶಿಲಕ್ಕೆ;
ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋದಲ್ಲಿದ್ದ ಸುಮಾರು 40 ವರ್ಷದ ವ್ಯಕ್ತಿ ಶಿಶಿಲ ಗ್ರಾಮಕ್ಕೆ ಎ.17 ರಂದು ಆಗಮಿಸಿದ್ದು ವಿಷಯ ತಿಳಿದ ಕಾರ್ಯಪಡೆ ಈತನಿಗೂ ಸೀಲು ಹಾಕಿ ಹೋಮ್ ಕ್ವಾರಂಟೈನ್ ಗೆ ಒಳಪಡಿಸಿದೆ.ಈತ ಬೆಂಗಳೂರಿನಿಂದ ಶಿವಮೊಗ್ಗದ ಸೊರಬಕ್ಕೆ ಬಂದು ಅಲ್ಲಿಂದ ಬೈಕಂಪಾಡಿಗೆ ಲಾರಿಯೊಂದರಲ್ಲಿ ಬಂದಿರುವುದಾಗಿ ತಿಳಿದು ಬಂದಿದೆ.
ಕಳೆದ ಹತ್ತಾರು ದಿನಗಳ ಹಿಂದೆ ಉಪ್ಪಿನಂಗಡಿ ಮೂಲದ ಓರ್ವ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಶುಕ್ರವಾರದಂದು ಪೊಸೆಟಿವ್ ರಿಪೋರ್ಟ್ ಬಂದಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ನಮ್ಮ ದ.ಕ. ಜಿಲ್ಲೆಗೆ ಚಾರ್ಮಾಡಿ ಮತ್ತು ಶಿರಾಡಿ ಘಡಿ ಮಾರ್ಗಗಳಿಂದ ಬರುತ್ತಿರುವವರ ಮೇಲೆ ಸೂಕ್ಷ್ಮತೆಯನ್ನು ಇರಿಸಿಕೊಳ್ಳುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಹೊರಗಿನ ಜಿಲ್ಲೆಗಳಿಂದ ಒಂದಲ್ಲ ಒಂದು ನೆಪದಲ್ಲಿ ಜಿಲ್ಲೆಗೆ ಬರುತ್ತಿರುವವರ ಸಂಖ್ಯೆ ದಿನಂಪ್ರತಿ ಆಗಾಗ ನಡೆಯುತ್ತಿರುವುದಕ್ಕೆ ಈ ಎರಡು ಘಟನೆಗಳೇ ಸಾಕ್ಷಿಯಾಗಿದೆ. ಈ ಎರಡೂ ಭಾಗಗಳ ಮೂಲಕ ಜಿಲ್ಲೆಯೊಳಗೆ ಬರುವ ವಾಹನಗಳ ಮೇಲೆ ಇನ್ನಷ್ಟು ಹದ್ದಿನ ಕಣ್ಣನ್ನು ಇಲಾಖೆಗಳು ಇಡಲೇಬೇಕು ಎನ್ನುವ ಮುನ್ನೆಚ್ಚರಿಕೆಯನ್ನು ಈ ಘಟನೆಗಳು ಸಾಬೀತು ಪಡಿಸಿದೆ.








