ಕೊಕ್ಕಡ, ಎ.17: ದೇಶದೆಲ್ಲೆಡೆ ಕೋವಿಡ್ 19 ನಿಂದ ಲಾಕ್ ಡೌನ್ ಘೋಷಣೆಯಾಗಿದ್ದು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರವೇಶಗಳು ಇಲ್ಲದಿರುವ ಸಂದರ್ಬದಲ್ಲಿಯೇ ಜನರು ವಿವಿಧ ಕಡೆಗಳಿಂದ ಮರಳುತ್ತಿರುವುದು ಗಮನಿಸಿದರೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿದೆಯೇ ಅನ್ನುವ ಬಗ್ಗೆ ಅನುಮಾನ ಮೂಡುತ್ತಿದೆ.
ಕೊಕ್ಕಡ ಗ್ರಾಮದ ಮುಂಡೂರುಪಳಿಕೆಯ ವ್ಯಕ್ತಿಯೋರ್ವರು ತೆಲಂಗಾಣದಲ್ಲಿ ಸುಗಂಧ ದ್ರವ್ಯ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು 15 ರ ತಡರಾತ್ರಿ ತಮ್ಮ ಮನೆಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿ ಶಿವಪ್ರಸಾದ್, ಧರ್ಮಸ್ಥಳ ಠಾಣೆಯ ಹೆಚ್.ಸಿ ರವೀಂದ್ರ ಹಾಗೂ ಕೊಕ್ಕಡ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿಗಳು ಅವರ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡು ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್ ಗೆ ಒಳಪಡಿಸಿದ ಘಟನೆ ನಡೆದಿದೆ.
ಬೆಂಗಳೂರಿನ ವ್ಯಕ್ತಿ ಬಂದದ್ದು ಲಾರಿಯಲ್ಲಿ??
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 40 ವರ್ಷದ ವ್ಯಕ್ತಿಯೋರ್ವರು ಕೂಡಾ ತಮ್ಮ ಶಿಶಿಲದ ಮನೆಗೆ ಮರಳಿದ್ದು, ಈ ಬಗ್ಗೆ ಸ್ಥಳೀಯರು ಕೊಟ್ಟ ಮಾಹಿತಿಯ ಮೇರೆಗೆ ಗ್ರಾಮ ಪಂಚಾಯತ್ ಕಾರ್ಯಪಡೆ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಿದ ಘಟನೆ ಎ.17 ರಂದು ನಡೆದಿದೆ. ಶಿಶಿಲದ ವ್ಯಕ್ತಿ ಬೆಂಗಳೂರಿನಿಂದ ನೇರವಾಗಿ ಶಿಶಿಲಕ್ಕೆ ಬರದೇ ಶಿವಮೊಗ್ಗ ಮಾರ್ಗವಾಗಿ ಬೈಕಂಪಾಡಿಗೆ ಬರುವ ಲಾರಿಯಲ್ಲಿ ಬಂದಿದ್ದಾರೆನ್ನುವ ಮಾಹಿತಿ ತಿಳಿದು ಬಂದಿದೆ.
ಪ್ರಯಾಣಕ್ಕಿಲ್ಲ ಅನುಮತಿ: ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಗಡಿಗಳನ್ನು ದಾಟಿ ಬಂದಿರುವುದು ತಪಾಸಣಾ ಕೇಂದ್ರಗಳ ಲೋಪವೇ??
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸಲು ಅನುಮತಿ ಇಲ್ಲದಿರುವಾಗಲೇ ಕೆಲವು ವ್ಯಕ್ತಿಗಳು ದೂರದ ಊರಿನಿಂದ ಮರಳುತ್ತಿರುವುದು ಜನಗಳಿಗೆ ಆತಂಕಕ್ಕೆಡೆ ಮಾಡಿರುವುದು ಒಂದು ಕಡೆಯಾದರೆ, ಬಿಗಿಯಾದ ಕಟ್ಟುನಿಟ್ಟಿನ ತಪಾಸಣಾ ಕೇಂದ್ರಗಳನ್ನು ದಾಟಿ ಬಂದಿರುವುದು ಹೇಗೆ ಅನ್ನುವ ಅನುಮಾನ ಕೂಡಾ ಸಹಜವಾಗಿಯೇ ಆತಂಕಕ್ಕೆಡೆಮಾಡಿದೆ. ಜಿಲ್ಲಾ ಗಡಿಗಳಲ್ಲಿ ಇನ್ನೂ ಹೆಚ್ಚಿನ ತಪಾಸಣಾ ಬಿಗಿಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯನ್ನು ಈ ಪ್ರಕರಣಗಳು ಮೂಡಿಸುತ್ತಿದೆ.
ಇದೀಗ ಬೆಳ್ತಂಗಡಿ ತಾಲೂಕು ದಂಡಾಧಿಕಾರಿಯವರು ತಾಲೂಕಿಗೆ ಪ್ರವೇಶಿಸುವ ಸಾರ್ವಜನಿಕರನ್ನು ತಪಾಸಣೆಗೊಳಪಡಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸಂಬಂದಪಟ್ಟ ಇಲಾಖಗಳಿಗೆ ಆದೇಶ ಹೊರಡಿಸಿದ್ದಾರೆ:
ವರದಿ : ಗುರುಮೂರ್ತಿ ಎಸ್ ಕೊಕ್ಕಡ








