ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಜಂಟಿಯಾಗಿ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಝೂಮ್ ಆ್ಯಪ್ ಮೂಲಕ ಆನ್ ಲೈನ್ ಕಾರ್ಯಗಾರವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಜ್ಯ ಎನ್.ಎಸ್.ಎಸ್. ಕೋಶದ ಯೋಜನಾಧಿಕಾರಿ ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಅರಿವೇ ಗುರು ಎನ್ನುವಂಥದ್ದು ನಮಗೆ ತಿಳಿದಿದೆ. ಅರಿವನ್ನು ನೀಡುವಂತಹ ಕಾರ್ಯ ಪವಿತ್ರವಾದದ್ದು. ಹಾಗಾಗಿ ಇಂತಹ ವೈರಸ್ ವಿರುದ್ಧ ಹೋರಾಡಬೇಕಾದರೆ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಮಾರುಹೋಗದೆ ಸರಿಯಾದ ಮಾಹಿತಿಯನ್ನು ಹಂಚಬೇಕು. ಎನ್.ಎಸ್.ಎಸ್. ಸ್ವಯಂಸೇವಕರು ವಿವಿಧ ಇಲಾಖೆಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಿಕೊಳ್ಳಿ ಎಂದು ನುಡಿದರು. ರಾಜ್ಯ ಎನ್.ಎಸ್.ಎಸ್. ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ ಮಾತನಾಡಿ, ಸಮಾಜದ ಸುರಕ್ಷತೆ ಜೊತೆಗೆ ವೈಯುಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ. ಸ್ವಯಂಸೇವಕರು ತಮ್ಮ ತಮ್ಮ ಊರಿನ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ನಿರ್ವಹಿಸುವ ಅವಕಾಶಗಳೂ ಇವೆ. ಅಗತ್ಯವಿರುವ ಜನರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡಿ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಎಸ್. ಉದ್ಘಾಟನಾ ನುಡಿಗಳನ್ನಾಡಿದರು. ಸ್ವಯಂಸೇವಕರು ಜನಜಾಗೃತಿ ಹಾಗೂ ಮುನ್ನೆಚ್ಚರಿಕಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸೇನಾನಿಗಳಾಗಿ ಮಾರ್ಪಾಡಾಗಬೇಕು. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ಶಿಸ್ತಿನ ಜೀವನವನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರೂ, ಕೋವಿಡ್-19 ನೋಡಲ್ ಅಧಿಕಾರಿಯಾದ ಡಾ. ಶಫೀರ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ ಎನ್.ಎಸ್.ಎಸ್. ಯೋಜನಾಧಿಕಾರಿ ಹಾಗೂ ಕೋವಿಡ್-19 ನೋಡಲ್ ಅಧಿಕಾರಿ ದೇವಿಪ್ರಸಾದ್ ಸ್ವಯಂಸೇವಕರಿಗೆ ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಇತರೆ ಮಾಹಿತಿಗಳನ್ನು ನೀಡಿದರು. ಸ್ವಯಂಸೇವಕರೊಂದಿಗೆ ಸಂವಾದವನ್ನು ನಡೆಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಸಾಂದರ್ಭಿಕ ನುಡಿಗಳನ್ನಾಡಿ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯ ಸಂಬಂಧ ಮತ್ತು ಸಂವಹನ ವಿಭಾಗದ ರಾಕೇಶ್ ಮತ್ತು ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಪ್ರೊ. ಆಶಾಕಿರಣ್ ಹಾಗೂ ಡಾ. ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.
ವರದಿ: ರಶ್ಮಿ ಯಾದವ್ ಕೆ ದ್ವಿತೀಯ ಪತ್ರಿಕೋದ್ಯಮ ವಿಭಾಗ ಎಸ್.ಡಿ.ಎಂ. ಪದವಿ ಕಾಲೇಜು ಉಜಿರೆ








