ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಸಿ ಬಂದ 24ಮಂದಿ ವಲಸೆ ಕಾರ್ಮಿಕರಿದ್ದಾರೆ. ಇದೀಗ ಲಾಕ್ ಡೌನಿನಿಂದಾಗಿ ಇತ್ತ ಕೆಲಸವೂ ಇಲ್ಲದೇ, ಅತ್ತ ತಮ್ಮೂರಿಗೂ ಹೋಗಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇವರೆಲ್ಲರೂ ಒಪ್ಪೊತ್ತಿನ ಕೂಳಿಗೂ ಪರದಾಡಬೇಕಾಗಿದೆ. ಇವರ ವೇದನೆಯನ್ನರಿತ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಈ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಪರಿಹಾರವಾಗಿ ನೀಡಿದ 50ಕೆ.ಜಿ. ಅಕ್ಕಿ ಹಾಗೂ 5ಕೆ.ಜಿ. ಅವಲಕ್ಕಿಯನ್ನು ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಹಸ್ತಾಂತರಿಸಿದರು. ಇದರೊಂದಿಗೆ ಸ್ಥಳೀಯ ದಾನಿಗಳಿಂದ ಗ್ರಾಮ ಪಂಚಾಯತಿನ ಸಂಗ್ರಹಿಸಿದ ಮೂಲಕ ಸಂಗ್ರಹಿಸಿದ 170ಕೆ.ಜಿ. ಅಕ್ಕಿ ಹಾಗೂ ಕರಾಯದ ಮೊಯ್ದಿನ್ ನೀಡಿದ ದಿನ ಬಳಕೆಯ ಸಾಮಾಗ್ರಿಗಳನ್ನೂ ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಹಸ್ತಾಂತರಿಸಲಾಯಿತು. ಅಕ್ಕಿ ಹಾಗೂ ದಿನಬಳಕೆ ವಸ್ತುಗಳನ್ನು ಸ್ವೀಕರಿಸಲು ಬಂದ ಪ್ರತಿಯೋರ್ವ ಕಾರ್ಮಿಕನೂ ಸರಿಯಾಗಿ ಮಾಸ್ಕ್ ಧರಿಸುವ ಮೂಲಕ ಕೊರೋನಾ ಸೋಂಕು ತಡೆಗೆ ಮುಂಜಾಗ್ರತೆ ವಹಿಸಿದ್ದರಾದರೂ; ಈ ಸಂದರ್ಭದಲ್ಲಿ ಅವರಿಗಿರುವ ಹೊಟ್ಟೆಹಸಿವು ಪಾಲಿಸಬೇಕಾದ ವೈಯಕ್ತಿಕ ಅಂತರವನ್ನು ಮರೆಸಿತ್ತು.








