ಮೂಡುಬಿದಿರೆ : ಕೊರೋನಾ ವೈರಸ್ ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಡೆಗಟ್ಟಲು ಸರಕಾರ ಮಾಡಿರುವ ಲಾಕ್ ಡೌನ್ ಆದೇಶ ದೈನಂದಿನ ಸಂಪಾದನೆಯಿಂದ ಜೀವಿಸುವ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಹೆಚ್ಚು ಕಂಗೆಡಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯದ ನಾಗರಿಕರ ನೆರವಿಗೆ ಪ್ರಥಮವಾಗಿ ಧಾವಿಸಿದ್ದು ಇಲ್ಲಿನ ಜವನೆರ್ ಬೆದ್ರ ಸಂಘಟನೆ. ಕಳೆದ ಎರಡು ವರ್ಷಗಳಿಂದ ಮೂಡುಬಿದಿರೆಯ ಸ್ವಚ್ಛತೆಗೆ ವಿಶೇಷ ಕೊಡುಗೆ ನೀಡಿರುವ ಜವನೆರ್ ಬೆದ್ರ ಸಂಘಟನೆ ಈಗ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಮಿಂಚಿನ ವೇಗದಲ್ಲಿ ಧಾವಿಸಿದೆ. ಮೂಡುಬಿದಿರೆ ವಲಯದ ಪ್ರತಿಯೊಂದು ಹಳ್ಳಿಯ ಮೂಲೆಮೂಲೆಗೂ ತಲುಪಿರುವ ಜವನೆರ್ ಬೆದ್ರ ಸಂಘಟನೆಯ ಯುವಕರ ತಂಡ ಇದುವರೆಗೆ 400ಕ್ಕೂ ಹೆಚ್ಚು ಆಹಾರದ ಕಿಟ್ ಗಳನ್ನು ಅರ್ಹ ಬಡವರ ಮನೆಗೇ ತಲುಪಿಸುವ ಮೂಲಕ ಮೂಡುಬಿದಿರೆಯ ನಾಗರಿಕರ ಮನಗೆದ್ದಿದೆ. ವೈಯಕ್ತಿಕ ಅಂತರ ಕಾಪಾಡಿಕೊಂಡು ನಮ್ಮ ಗುರಿ ಸಾಧನೆಗೆ ಒತ್ತು ನೀಡಲಾಗಿದೆ ಎಂದು ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಪತ್ರಿಕೆಗೆ ತಿಳಿಸಿದ್ದಾರೆ.








