ಅಪ್ಪನ ನಿರ್ಮೋಹಿ ಜೀವನ ಪಯಣ

ಅಪ್ಪನ ನಿರ್ಮೋಹಿ ಜೀವನ ಪಯಣ
Facebook
Twitter
LinkedIn
WhatsApp

-ದೀಪಾ ಫಡಕೆ


ಮೂವತ್ತೇಳು ವರ್ಷಗಳ ಹಿಂದಿನ ಮಾತಿದು. ಆಗಿನ್ನೂ ಲವ್ ಮ್ಯಾರೇಜು ಎಂದರೆ ಹೆತ್ತವರು ಕೆಣ್ಣು ಕೆಂಪಾಗಿಸಿಕೊಳ್ಳುವ ಕಾಲವದು. ಅಣ್ಣನ ಸ್ನೇಹಿತರಲ್ಲಿ ಒಬ್ಬರು ಪ್ರೇಮವಿವಾಹ ಮಾಡಿಕೊಂಡು ವಾಸಕ್ಕೆ ಮನೆ ಸಿಗದೇ ಒದ್ದಾಡುತ್ತಿದ್ದರು. ಅವರದೆ ಸಮುದಾಯದೊಳಗೆ ಮದುವೆಯಾಗಿದ್ದರೂ ಅವರು ಭಿನ್ನ ಒಳಪಂಗಡಕ್ಕೆ ಸೇರಿದ್ದರು. ನಮ್ಮ ಮನೆಯ ಅಂಗಳದಲ್ಲಿ ಒಂದು ಔಟ್ ಹೌಸ್ ಇದ್ದದ್ದೂ ಸ್ನೇಹಿತರ ಕಣ್ಣಿಗೆ ಬಿದ್ದಿತ್ತು. ಪರೀಕ್ಷಿಸಲೆಂದೋ ನಿಜಕ್ಕೂ ಬೇಕೆಂದೊ ಬಾಡಿಗೆಗೆ ಕೊಡುವಿರಾ ಎಂದು ಅಣ್ಣನಲ್ಲಿ ಕೇಳಿದ್ದರು. ಅಣ್ಣ, ಅಪ್ಪನಲ್ಲಿ ಬಂದು ಹೀಗೀಗೆ ನಡೆದಿದೆ ಅಪ್ಪ, ಅವರಿಗೆ ವಾಸಕ್ಕೆ ಮನೆ ಸಿಗುತ್ತಿಲ್ಲ’ ಎಂದೊಡನೇ ಹಿಂದೆಮುಂದೆ ಯೋಚಿಸದೇನಾಳೆನೇ ಬರಲಿ, ಮನೆ ಕ್ಲೀನ್ ಮಾಡಿಸಿಡುವಾ’ ಎಂದು ಬಿಟ್ಟರು. ಅಣ್ಣನ ಸ್ನೇಹಿತ ಹೊಸ ಮದುಮಕ್ಕಳು ಮನೆಯಲ್ಲಿ ವಾಸಕ್ಕೆ ಆರಂಭಿಸಿದಷ್ಟೇ. ಅಪ್ಪನ ಮೇಲೆ ಊರಿನ ಜನ ತಿರುಗಿ ಬಿದ್ದಿದ್ದರು. ಕಾರಣ, ಅಣ್ಣನ ಸ್ನೇಹಿತ ಮುಸ್ಲಿಂ ಆಗಿದ್ದುದು. ಬೇಕಾದಷ್ಟು ಅನಾಮಧೇಯ ಪತ್ರಗಳು ಅಪ್ಪನನ್ನು ಬಂದು ತಲುಪಿದ್ದವು. ಉಹುಂ, ಒಂದು ಇಂಚು ಕೂಡ ಅಪ್ಪ ಕುಗ್ಗಿರಲಿಲ್ಲ. ತಮ್ಮ ಎಂದಿನ ಡೊಂಟ್ ಕೇರ್ ಪಾಲಿಸಿ ಮುಂದುವರೆಸಿದರು.
ಮುಂದೆ ಮತ್ತೊಂದು ಪ್ರೇಮವಿವಾಹದ ಜೋಡಿಗೂ ಇದೇ ಗಂಗಾಧರ ಫಡ್ಕೆಯವರು ಒಂದಷ್ಟು ಅವರ ಸ್ನೇಹಿತರ ಮನಸ್ಸಿಗೆ ನೋವಾದರೂ ಅಣ್ಣನ ಮಾತಿಗೆ, ಸ್ನೇಹಕ್ಕೆ ಗೌರವ ಕೊಟ್ಟು ಮನೆ ಕೊಟ್ಟು ಬೇಕಾದಷ್ಟು ಗೇಲಿ, ಕುಹಕವನ್ನು ಕೇಳಬೇಕಾಯಿತು. ಆಗಲೂ ನನ್ನಪ್ಪ ಹಿಂದೆ ಮುಂದೆ ಯೋಚಿಸಿರಲಿಲ್ಲ. ಇಷ್ಟು ಎದೆಗಾರಿಕೆಯ ನನ್ನಪ್ಪ ಏನೂ ಆಗರ್ಭ ಶ್ರೀಮಂತ ಆಗಿರಲಿಲ್ಲ. ಜೀವನಕ್ಕೆ ತಕ್ಕಷ್ಟು ಫಸಲು ಕೊಡುವ ಪುಟ್ಟ ಅಡಿಕೆ ತೋಟ, ಸಹಕಾರಿ ಬ್ಯಾಂಕಿನ ಸಣ್ಣ ಸಂಬಳದ ನೌಕರಿಯಷ್ಟೇ ಇದ್ದುದು. ಆದರೆ ಅದಕ್ಕೂ ಮೀರಿದ ಹುಂಬತನ ಅಪ್ಪನಲ್ಲಿತ್ತು.
ಹೀಗೆ ಜಾತಿ, ಧರ್ಮ ನೋಡದೇ ಬದುಕಿದ ಅಪ್ಪ ಕಲಿತದ್ದು ಹತ್ತನೇ ತರಗತಿವರೆಗೆ. ಊರಿನ ಮನ್ನಣೆ ಗಳಿಸಿದ್ದ ಅಜ್ಜ ವೀರೇಶ್ವರ ಫಡ್ಕೆ ಮೇಷ್ಟ್ರಾಗಿದ್ದರು. ಸಹಜವಾಗಿ ಅವರಿಗೆ ಅವರ ಮಕ್ಕಳು ಉನ್ನತ ವಿದ್ಯಾಭ್ಯಾಸಿಗಳಾಗಬೇಕು ಎನ್ನುವ ಆಸೆಯಿತ್ತಂತೆ. ಆದರೆ ಓದು ಮುಂದುವರೆಸದ ಅಪ್ಪನ ಮೇಲೆ ಸಿಟ್ಟಿನಿಂದ ಅಜ್ಜ, ಒಂದು ಗೋಣಿ ಚೀಲದ ತುಂಬ ಪುಸ್ತಕಗಳನ್ನು ನದಿಗೆ ಎಸೆದಿದ್ದರಂತೇ! ಯಾವುದರ ಮೇಲೂ ವಿಪರೀತ ಮೋಹವಿರಲೇ ಇಲ್ಲ ನನ್ನಪ್ಪನಿಗೆ. ಊಟ, ಬಟ್ಟೆಬರೆ ಚಿನ್ನ ಆಸ್ತಿ ಹೀಗೆ ಯಾವುದೂ ಆಕರ್ಷಣೀಯವಾಗಿ ಕಾಣಲೇ ಇಲ್ಲವೆನೋ! ಗಂಜಿಯಾದರೂ ಸರಿ, ಆ ಹೊತ್ತಿಗೆ ಸಿಗಬೇಕು ಅಷ್ಟೇ. ಸಿಟ್ಟೊಂದು ಮೂಗಿನ ಮೇಲೆ ಸದಾ ರಾರಾಜಿಸುತ್ತಿತ್ತು.
ಅಪ್ಪನ ವಿಶಿಷ್ಟತೆ ಇದ್ದುದು, ಅವರು ಲೋಕರೂಢಿಗಿಂತ ಭಿನ್ನವಾಗಿ ಬದುಕಿದ್ದು. ಮುಸ್ಲಿಂ ಸ್ನೇಹಿತರಿಗೆ ಮನೆ ಬಾಡಿಗೆಗೆ ನೀಡಿದ್ದು ಮಾತ್ರವಲ್ಲ. ಅಪ್ಪನ ಸಾಹಚರ್ಯ ಇತರೇ ಜಾತಿಯವರೊಂದಿಗೆ ಹೆಚ್ಚಿಗೇ ಇದ್ದುದು ನಾನು ಕಂಡ ಸತ್ಯ. ನಲವತ್ತು ಐವತ್ತು ವರ್ಷಗಳ ಹಿಂದಿನ ಮನಸ್ಥಿತಿಗೆ ಸಂಪೂರ್ಣವಾಗಿ ಮುಂದುವರೆದ ಮನಸ್ಥಿತಿ ಅಪ್ಪನದಾಗಿತ್ತು. ಸಾಮಾನ್ಯವಾಗಿ ಬ್ರಾಹ್ಮಣರ ಮನಸ್ಥಿತಿಗಳನ್ನು ಲೋಕಿಸಿದಾಗ ಅರಿವಿಗೆ ಬರುವ ಸಾಮಾನ್ಯ ವಿಷಯವೆಂದರೆ, ಬ್ರಾಹ್ಮಣರ ಆಯಾ ಒಳಪಂಗಡದವರಿಗೆ ಅವರದೇ ರೀತಿನೀತಿಗಳು ಸರ್ವಶ್ರೇಷ್ಠ ಎನ್ನುವ ಮನೋಭಾವ. ಈ ಮನೋಭಾವ ಯಾವ ಜಾತಿಯವರನ್ನೂ ಯಾವ ಧರ್ಮದವರನ್ನೂ ಬಿಟ್ಟಿಲ್ಲ. ಎಲ್ಲರಿಗೂ ಅವರೇ ಶ್ರೇಷ್ಠರು ಎನ್ನುವ ಸಂಕುಚಿತತೆ. ಆದರೆ ಅಪ್ಪ ಇದಕ್ಕಿಂತ ಭಿನ್ನ ಸ್ವಭಾವದವರು. ಯಾವತ್ತೂ ತಾನು ಚಿತ್ಪಾವನನೆಂದಾಗಲಿ, ಕೊನೆಪಕ್ಷ ಬ್ರಾಹ್ಮಣನೆಂದಾಗಲಿ ಇರಲಿಲ್ಲ. ಕೆಳವರ್ಗದವರನ್ನೂ ದೂರವಿಡುವ ಅಭ್ಯಾಸ ಇನ್ನೂ ಚಾಲ್ತಿಯಲ್ಲಿದ್ದ ದಿನಗಳು ಅವು. ಅಪ್ಪನ ಬೈಕಿನ ಹಿಂದೆ ಕೆಳವರ್ಗದ ಜೋಗಿ ಸದಾ ಅಪ್ಪನೊಂದಿಗೆ ಪೇಟೆ ಸುತ್ತಿ ಬರುತ್ತಿದ್ದ. ಮಕ್ಕಳಾದ ನಮಗೂ ಹೊಟ್ಟೆಕಿಚ್ಚಾಗುವಂತೇ ಜೋಗಿಯನ್ನು ಬೈಕಿನಲ್ಲಿ ಕೂರಿಸಿ, ಒಮ್ಮೆ ಅವನು ಅಣ್ಣಾ, ಸೈಲೆನ್ಸರ್ ತೆಗೆದು ಓಡಿಸಿ’ ಎಂದದ್ದಕ್ಕೆ ಸೈಲೆನ್ಸರ್ ತೆಗೆದೂ ಇಡೀ ವಠಾರಕ್ಕೆ ತಾನು ಬರುವ ಸದ್ದು ಕೇಳುವಂತೇ ಬೈಕ್ ಓಡಿಸಿದ್ದರು. ಮಾತುಮಾತಿಗೆ ನಾಲ್ಕು ಮಕ್ಕಳನ್ನು ತಾನು ಬೇರೆ ಬೇರೆ ಪಂಗಡಗಳಿಗೆ ಕೊಟ್ಟು ವಿವಾಹ ಮಾಡಿಸುತ್ತೇನೆ ಎಂದು ಹೇಳಿದ್ದೂ ಮಾತ್ರವಲ್ಲ; ಹಾಗೇ ಮಾಡಿ ತೋರಿಸಿದರು. ಅವರಿಗೆ ಜಾತಿ ಯಾವತ್ತೂ ಮುಖ್ಯವಾಗಿರಲೇ ಇಲ್ಲ ಎನ್ನಲಷ್ಟೇ ಇದನ್ನಿಲ್ಲಿ ನೆನಪಿಸುತ್ತಿದ್ದೇನೆ. ಹೀಗೆ ಪ್ರೇಮವಿವಾಹವಾದವರಿಗೆ ಮನೆ ಕೊಟ್ಟು ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದ ಅಪ್ಪನಿಗೆ ದೇವರಿಗಿಂತಲೂ ದೈವಗಳ ಮೇಲೆ ಹೆಚ್ಚು ನಂಬಿಕೆಯಿತ್ತು. ಖಣಲ್ ಖಣಲ್ ಎಂದು ಗಂಟೆ ಬಾರಿಸಿ ನಿಮಿಷಗಳಲ್ಲಿ ಪೂಜೆ ಮುಗಿಸುತ್ತಿದ್ದ ಅಪ್ಪ ಭೂತಗಳ ಭಂಡಾರದ ಮುಂದೆ ಶ್ರದ್ಧೆಯಿಂದ ನಿಂತು ಮಣಮಣಸಿ ಕೈ ಮುಗಿಯುತ್ತಿದ್ದರು. ಸಾಲ ಮಾಡಿಯಾದರೂ ಭೂತಗಳಿಗೆ ವರ್ಷಾವಧಿ ಕೋಲ ಕೊಟ್ಟ ದಾಖಲೆ ನನ್ನಪ್ಪನದೇ. ಪ್ರತಿಯೊಂದೂ ಭಿನ್ನವಾಗಿ ಯೋಚಿಸುತ್ತಿದ್ದ ಅಪ್ಪ ಗುಡ್ಡೆ ಕಡಿದು ತೋಟವಿಟ್ಟ ಛಲಗಾರ. ಅದೂ ಒಂದು ದೊಡ್ಡ ಪ್ರಹಸನವೇ. ಏರುತಗ್ಗುಗಳ ಗುಡ್ಡೆಯನ್ನು ಜೆಸಿಬಿಗಳಿಲ್ಲದ ನಲವತ್ತು ವರ್ಷಗಳ ಹಿಂದೆ ಕೆಲಸಗಾರರೇ ಹಾರೆ ಪಿಕ್ಕಾಸಿನಿಂದ ಅಗಿಯುವ ಕಷ್ಟವಿತ್ತು. ಸಮಯ ಸಾಲದೆಂದು ಕೆಲಸ ಬೇಗನೇ ನಡೆಯಬೇಕೆಂದು ರಾತ್ರೆ ಗ್ಯಾಸ್ ಲೈಟನ್ನಿಟ್ಟುಕೊಂಡು ಗುಡ್ಡೆ ಅಗಿಸಿ ಊರಿನವರಿಡೀ ಅಚ್ಚರಿಯಿಂದ ನೋಡುವಂತೇ ಕೆಲಸ ಮಾಡಿಸಿದವರು ಅಪ್ಪ. ಅಷ್ಟು ಕಷ್ಟ ಪಟ್ಟು ಪ್ರತಿಯೊಂದು ಅಲಫಲಗಳನ್ನು ಹುಡುಕಿ ಹುಡುಕಿ ತಂದು ನೆಟ್ಟು ಬೆಳೆಸಿದ ಅಂತಹ ಬಂಗಾರದ ತಟ್ಟೆಯಂಥ ತೋಟವನ್ನು ಸಾಲ ಹಿಂದಿರುಗಿಸಲಾಗದೇ ಮಾರಾಟ ಮಾಡಬೇಕಾಯಿತು ಅನ್ನೋದು ವಿಷಾದದ ವಿಷಯವೇ! ನಮ್ಮಲ್ಲಿ ಸಂಜೆಯ ಭಜನೆ ನಿತ್ಯದ ವಿಧಿಗಳಲ್ಲಿ ಒಂದಾಗಿತ್ತು. ಅಪ್ಪ ಕೆಲಸದಿಂದ ಬಂದೊಡನೆ ಶುರುವಾಗುತ್ತಿತ್ತು. ಮರಾಠಿ ಅಭಂಗಗಳನ್ನು ಹಾಡುತ್ತಿದ್ದ ಅಪ್ಪ ಅಮ್ಮನಿಂದಲೇ ನಮಗೆಲ್ಲ ಸಂಗೀತದ, ದಾಸರ ಹಾಡುಗಳ ಪರಿಚಯವಾಗಿದ್ದು. ಊರಿನಲ್ಲಿ ಯಾವ ಶ್ರೀಮಂತ ಮನೆಯಲ್ಲೂ ಇಲ್ಲದ ಗ್ರಾಮಾಫೋನು ನಮ್ಮಲ್ಲಿತ್ತು. ಅಪ್ಪನಲ್ಲಿ ಅಪರೂಪದಲ್ಲಿ ಅಪರೂಪದ ಗ್ರಾಮಾಫೋನಿನ ತಟ್ಟೆಗಳಿದ್ದವು. ಲತಾ ಮಂಗೇಶ್ಕರಳ ನೂರಾರು ಹಾಡುಗಳು, ಪ್ರಭಾಕರ ಕಾರೇಕರ್, ಸುಧೀರ್ ಫಡ್ಕೆಯ ಅಭಂಗಗಳು, ವಸಂತರಾವ್ ದೇಶಪಾಂಡೆಯವರ ನಾಟ್ಯಸಂಗೀತದ ಹಾಡುಗಳು ನಮಗೆ ಪರಿಚಯವಾಗಿದ್ದೇ ಹೀಗೆ. ಆ ಹೊತ್ತು ಇಂದಿಗೂ ನನ್ನ ಬದುಕಿನÀ ಅತ್ಯಂತ ಸಂತೃಪ್ತ ಮತ್ತು ಸಮೃದ್ಧ ಬಾಲ್ಯದ ನೆನಪಾಗಿದೆ. ಹಾರ್ಮೋನಿಯಂ ನುಡಿಸುವ ಅಮ್ಮ, ತಾಳ ಹಾಕುವ ನಾನು, ಅಕ್ಕ ಮತ್ತು ಪುಟ್ಟ ತಂಗಿ ಮತ್ತು ಮರದ ದೊಡ್ಡ ದೇವರ ಮಂಟಪದ ಒಂದು ಭಾಗಕ್ಕೆ ನಾಣ್ಯದಿಂದ ತಬಲಾ ನುಡಿಸುವ ಅಣ್ಣ...... ಕಾಲ ಅಲ್ಲೇ ನಿಂತು ಬಿಡಬೇಕಿತ್ತು. ಹಾಗೇ ಫ್ರೀಜ್ ಆಗಬೇಕಿತ್ತು ಆ ಕ್ಷಣಗಳು ಎಂದು ನೂರು ಬಾರಿ ಏಕೆ ಸಾವಿರ ಬಾರಿ ಅನಿಸುತ್ತದೆ. ಆದರೆ ದುರ್ದೈವ, ಕಾಲದ ಗುಣ ನಡೆಯುವುದಷ್ಟೇ ಅಲ್ಲವೇ! ಹೆಣ್ಣುಮಕ್ಕಳು ವಧುಪರೀಕ್ಷೆಗೆ ಬೇಕಷ್ಟು ಮತ್ತು ಸಂಜೆಯ ಭಜನೆಗೆ ತಕ್ಕಷ್ಟು ಸಂಗೀತ ಹಾಡಲು ಗೊತ್ತಿದ್ದರೆ ಸಾಕೆಂದು ಇದ್ದ ದಿನಗಳು ಅವು. ನನ್ನಪ್ಪ ಮತ್ತು ಚಿಕ್ಕಪ್ಪನಿಗೆ ಸಂಗೀತ ನೃತ್ಯದ ಹುಚ್ಚು. ಸಂಗೀತದ ಆಸಕ್ತಿ ನನ್ನಮ್ಮನ ಅಮ್ಮನಿಂದ ಅಂದರೆ ಅಜ್ಜಿಮನೆಯವರಿಂದ ನಮಗೆಲ್ಲರಿಗೂ ಬಳುವಳಿಯಾಗಿ ಬಂದ ವಿಶೇಷತೆ. ಅಜ್ಜಿ ಜಲತರಂಗ ನುಡಿಸುತ್ತಿದ್ದರೆ ಮಾವ ತಬಲಾ ನುಡಿಸುವ ಆಸಕ್ತಿಯಿದ್ದವರು. ಅಮ್ಮ ಮತ್ತು ಚಿಕ್ಕಮ್ಮಂದಿರು ಮಧುರವಾಗಿ ಹಾಡುತ್ತಿದ್ದರು. ಆದರೆ ನೃತ್ಯ ಕಲಿತವರು ಯಾರೂ ಇರಲಿಲ್ಲ ಅಷ್ಟರಮಟ್ಟಿಗದು ವಜ್ರ್ಯವಾಗಿತ್ತು. ಆಗಲೇ ಚಿಕ್ಕಪ್ಪ ನೃತ್ಯದ ಹುಚ್ಚು ಹತ್ತಿಸಿಕೊಂಡಿದ್ದ ಅಕ್ಕನನ್ನು ಅವರ ಸಾಥಿಯಾಗಿ ನನ್ನನ್ನೂ ಡಾನ್ಸ್ ಕ್ಲಾಸಿಗೆ ಸೇರಿಸಿದ್ದು. ಬಂಧುಗಳ ಮದುವೆಮುಂಜಿಗಳಲ್ಲಿ ಅಪ್ಪನ ರಟ್ಟೆ ಹಿಡಿದುಏನು ಹೆಣ್ಣು ಮಕ್ಕಳಿಗೆ ಡಾನ್ಸ್ ಕಲೀಸ್ತಿದಿಯಾ, ಪಿಕ್ಚರಿಗೆ ಸೇರಿಸ್ತಿಯಾ ‘ ಎಂದೂ ಕೇಳಿದ ಹಿರಿಯರಿದ್ದಾರೆ. ಆಗೆಲ್ಲ ತಮ್ಮ ಎಂದಿನ ಉಡಾಫೆಯ ನಗುವಿನೊಂದಿಗೆ ಅವರ ಮಾತನ್ನು ಅಲ್ಲಲ್ಲೇ ತಳ್ಳಿ ಹಾಕಿ ಬಿಡುತ್ತಿದ್ದರು. ವ್ಯಕ್ತಿಗತ ಆಸಕ್ತಿಗಳನ್ನು ಬೆಳೆಸಿದ ಇಂತಹ ಅಪ್ಪ ನಾನೂ ನನ್ನಕ್ಕ ಜೊತೆಯಲ್ಲಿ ಪಿಎಚ್ಡಿ ಪದವಿ ಪಡೆದಾಗ ಅನುಭವಿಸಿದ ಆನಂದ ಅಷ್ಟಿಷ್ಟಲ್ಲ. ಕನ್ನಡಕ ಹಾಕದೇ ಕಣ್ಣಿನ ಹತ್ತಿರ ತಂದು ಪಿಎಚ್ಡಿ ಸರ್ಟಿಫಿಕೇಟನ್ನು ಹತ್ತಾರು ಬಾರಿ ತಿರುಗಿಸಿ ತಿರುಗಿಸಿ ನೋಡಿ ಆನಂದಿಸಿದ್ದರು.
ಸಹಕಾರಿ ಸೊಸೈಟಿಯಲ್ಲಿ ನೌಕರಿಯಿದ್ದ ಅಪ್ಪ ತೋಟದ ಜವಾಬ್ದಾರಿಯನ್ನು ಅಮ್ಮನಿಗೆ ನೀಡಿದ್ದರು. ಅಮ್ಮನ ಕಾರ್ಯದಕ್ಷತೆಯ ಬಗ್ಗೆ ಸ್ವಲ್ಪವೂ ಅಪನಂಬಿಕೆಯಾಗಲಿ, ಅಂಜಿಕೆಯಾಗಲಿ ಇಲ್ಲದ ಅಪ್ಪ ಅಮ್ಮನಿಗೆ ಜೇನು ಸಾಕಾಣಿಕೆಯ ಬಗ್ಗೆ ಆಸಕ್ತಿ ಇದ್ದುದನ್ನು ಗಮನಿಸಿ ಅಮ್ಮನ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದರು. ಜೇನು ತೆಗೆಯುವ ದೊಡ್ಡ ಮಿಶನ್ ಪ್ರಾಯಶಃ ನಮ್ಮನೆಯಲ್ಲಿ ಮಾತ್ರ ಇದ್ದುದೇನೋ. ಹೀಗೆ ಎಲ್ಲವೂ ಸರಿ ನಡೆಯುತ್ತಿದೆ ಎನ್ನುವ ಭ್ರಮೆಯಲ್ಲಿ ಒಮ್ಮೊಮ್ಮೆ ಬದುಕಿನ ಓಟ ನಮ್ಮ ಅಂಕೆ ಮೀರಿ ಹೋಗುತ್ತದೇನೋ. ಅಪ್ಪ ಎಣಿಸಿದಂತೇ ಎಲ್ಲವೂ ನಡೆಯದೇ ಹೋಗಲಾರಂಭಿಸಿತು. ಅವರ ಬದುಕಿನ ದೊಡ್ಡ ಮಂತ್ರವೇ ದೇರ್ ಲೆಕ್ಕ ಪೋಯಿಜಿಂಡಾ, ಪೋಯಿಲೆಕ್ಕ ದೇರುನ’. ಬದುಕು ನಾವೆಣಿದಂತೇ ನಡೆಯದಿದ್ದರೆ ಬದುಕು ಎಳೆದುಕೊಂಡು ಹೋಗುವತ್ತ ನಾವು ಸಾಗುವುದೇ ಜಾಣತನವೆಂದೇ ಬದುಕಿದರು ಅಪ್ಪ. ಪುಟ್ಟ ಅಡಿಕೆ ತೋಟ, ಸರ್ಕಾರದ ಸೀಡ್ ಫಾರ್ಮಿಗೆ ಗುಣಮಟ್ಟದ ತೆಂಗಿನಗಿಡ ಬೆಳೆÉಸಲು ತೆಂಗಿನಕಾಯಿ ನೀಡುತ್ತಿದ್ದ ತೋಟದಿಂದ ಬದುಕು ನಿರ್ವಹಣೆ ಕಷ್ಟವಾಗುತ್ತಿದ್ದ ದಿನಗಳನ್ನೂ ಅಪ್ಪ ನೋಡಬೇಕಾಯಿತು. ಸಹಕಾರಿ ಬ್ಯಾಂಕಿನಲ್ಲಿ ನಂಬಿದವರಿಂದ ಮೋಸ ಅನುಭವಿಸಿದ್ದ ಅಪ್ಪ ಸಂಪೂರ್ಣ ಕಂಗಾಲಾಗಿದ್ದರು. ಆಗ ಕೈಹಿಡಿದಿದ್ದು ನಂದಿನಿ ಹಾಲನ್ನು ಮಾರಾಟ ಮಾಡುವ ಎಜೆನ್ಸಿ. ಹಾಗೂ ಹೀಗೂ ಸಂಕಷ್ಟದಲ್ಲೇ ದಿನ ಕಳೆಯುತ್ತಿದ್ದ ಅಪ್ಪ ಮದುವೆಗೆ ತಯಾರಾಗಿದ್ದ ಅಕ್ಕನ ಮದುವೆ ಖರ್ಚನ್ನು ನಿಭಾಯಿಸಲೂ ಶಕ್ತರಾಗಿರಲಿಲ್ಲ. ಅದನ್ನರಿತ ಅಕ್ಕ ಯಾರಿಗೂ ತೊಂದರೆ ಬೇಡವೆಂದು ಸರಳ ವಿವಾಹವಾಗಿ ಬಂದಾಗ ದುಃಖವಿದ್ದರೂ ಬಂಧುಗಳ, ಊರಿನವರ ಗೇಲಿಮಾತುಗಳ ಬಗ್ಗೆ ಗೊತ್ತಿದ್ದರೂ ಲವಲೇಶದಷ್ಟೂ ಬೇಸರ ತೋರದೇ ಮನೆಗೆ ಬಂದ ಮಗಳು ಅಳಿಯನನ್ನು ಕಾರು ಮಾಡಿ ಕಟೀಲು ಮೊದಲಾದ ದೇವಸ್ಥಾನಗಳ ದರ್ಶನ ಮಾಡಿಸಲು ಕರಕೊಂಡು ಹೋಗಿದ್ದು ಅಪ್ಪನ ನಿರ್ಲಿಪ್ತತೆಗೆ ಸಾಕ್ಷಿ. ಮೈಸೂರಿನಲ್ಲಿ ವ್ಯಾಪಾರ ಹೋಟೆಲು ಆರಂಭಿಸಿದ ಅಣ್ಣ, ಮೈಸೂರಲ್ಲೇ ನೆಲೆಯಾಗುವ ಹಂಬಲ ತೋರಿದಾಗ, ಬದುಕಿನ ಹತ್ತಾರು ಹೊಡೆತಗಳಿಂದ ಕಂಗಾಲಾಗಿದ್ದ ಅಪ್ಪ, ಕ್ಷಣವೂ ಹಿಂದೆಮುಂದೆ ಯೋಚಿಸದೇ ಅದುವರೆಗೂ ನಮ್ಮ ಪೂರ್ವಿಕರು ಬಾಳಿ ಬದುಕಿದ ಮನೆ ತೋಟವನ್ನು ಮಾರಿ ಒಮ್ಮೆಯೂ ತಿರುಗಿ ನೋಡದೇ ಮೈಸೂರು ವಾಸಿಯಾದರು. ಬದುಕಿನ ತಿರುವುಗಳಿಗೆ, ಯಾವುದೇ ನಿರ್ಧಾರಗಳಿಗೂ ಯಾರನ್ನೂ ಒಮ್ಮೆಯೂ ದೂಷಿಸದೇ ಇದ್ದ ಅಪ್ಪ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಮತ್ತೆ ಊರಿನ ಸುದ್ದಿ ಮಾತಾಡತೊಡಗಿದ್ದರು.ತೋಡಿನಲ್ಲಿ ನೀರು ಬಂತೇ, ಕೊಯಿಲಾಯಿತೇ’ ಹೀಗೆ. ನಮ್ಮ ಕುಟುಂಬ ವೈದ್ಯರ ಪ್ರಕಾರ ಪ್ರಾಯಶಃ ಅವರು ತಮ್ಮ ಅಂತಿಮ ಪ್ರಯಾಣದ ಸಿದ್ಧತೆ ಮಾಡತೊಡಗಿದ್ದರು!
ಮೈಸೂರಿಗೆ ಬಂದು ಮೈಸೂರಿನ ಜೀವನಕ್ಕೆ ಅದೆಷ್ಟು ಸುಲಭವಾಗಿ ಹೊಂದಿಕೊಂಡರು ಎಂದರೆ ಅಕ್ಕ ಕೃಪಾ ಫಡ್ಕೆ ಮತ್ತವರ ತಂಡದ ಜನಪ್ರಿಯ ನೃತ್ಯನಾಟಕ ಮದಗದ ಕೆಂಚವ್ವ’ದಲ್ಲಿ ಊರಗೌಡನ ಪಾತ್ರವನ್ನೂ ವಹಿಸಿದ್ದರು. ಆಜಾನುಬಾಹು ಸುಂದರ ನನ್ನಪ್ಪನ ನಿಲುವನ್ನು ನೋಡಿ, ವಿಜ್ಞಾನ ಲೇಖಕ, ಗಣಿತಶಾಸ್ತ್ರಜ್ಞ, ಕಲಾವಿಮರ್ಶಕ ದಿವಂಗತ ಜಿ.ಟಿ. ನಾರಾಯಣರಾವ್ ಅವರು, ಅಂದು ತಮ್ಮ ವಿಮರ್ಶೆಯಲ್ಲಿ,ನಿಂತ ನೆಲವನ್ನು ತುಂಬಬಲ್ಲ ಸುಂದರ’ ಇಷ್ಟು ಸುಂದರ ಊರಗೌಡನನ್ನು ಇದುವರೆಗೂ ನೋಡೇ ಇಲ್ಲ ಎಂದು ಶ್ಲಾಘಿಸಿದ್ದರು. ಇಡೀ ನೃತ್ಯಗಿರಿಯ ನೂರಾರು ಮಕ್ಕಳಿಗೆ ನನ್ನಪ್ಪ ಮೆಚ್ಚಿನ ದಾದಾ ಆಗಿದ್ದರು. ಎಲ್ಲರಿಗೂ ಅವರವರ ಅಪ್ಪ ಅಮ್ಮ ತುಂಬಾ ಮುಖ್ಯವೇ. ಆಳಿನಿಂದ ಅರಸನವರೆಗೂ ಈ ಸುಂದರ ಪ್ರಪಂಚಕ್ಕೆ ತಮ್ಮನ್ನು ತಂದ ಹೆತ್ತವರು ತುಂಬ ವಿಶೇಷವೇ! ಆದರೆ ಅಪ್ಪ ನಿಜಕ್ಕೂ ನಿರ್ಮೋಹಿಯಾಗಿದ್ದ. ಬದುಕಿನೆಡೆಗೆ ಸಣ್ಣ ನಿರ್ಲಕ್ಷ್ಯ ಬೆಳೆಸಿಕೊಂಡಿದ್ದ ಅಪ್ಪ, ಅವರನ್ನು ಸದ್ದಿಲ್ಲದೇ ದಿನದಿಂದ ದಿನಕ್ಕೆ ಇಂಚು ಇಂಚಾಗಿ ಕೊಲ್ಲಲಾರಂಭಿಸಿದ ಡಯಾಬಿಟೀಸ್ ಕಾಯಿಲೆಯನ್ನೂ ನಿರ್ಲಕ್ಷಿಸಿದರು. ನಿರ್ಲಕ್ಷಿಸುತ್ತಾ ಹೋದರು. ಪಾಶ್ರ್ವವಾಯುವಿನಿಂದಲೂ ಪೀಡಿತರಾದ ಮೇಲೆ ಆನೆಕಾಲಿನಂತಾಗಿದ್ದ ಎಡಕಾಲು ಅವರನ್ನು ಮಾನಸಿಕವಾಗಿಯೂ ಸೋಲಿಸಿತ್ತು. ಧಡಧಡನೇ ಭೂಮಿಯದುರುವಂತೇ ನಡೆಯುತ್ತಿದ್ದ ಅಪ್ಪ, ಕೊನೆಕೊನೆಗೆ ಕಾಲನ್ನು ಏಳೆದೆಳೆದು ನಡೆಯುತ್ತಿದ್ದ ದೃಶ್ಯ ನೋಡಲು ಸಂಕಟ ಹುಟ್ಟಿಸುತ್ತಿತ್ತು.
ನಿತ್ಯವೂ ತಮ್ಮ ಸದೃಢವಾಗಿದ್ದ ಒಂದು ಕೈಯಿಂದ ಪುಟ ತಿರುಗಿಸಿ ತಿರುಗಿಸಿ ಪೇಪರ್ ಓದುತ್ತಿದ್ದ ಅಪ್ಪನಲ್ಲೊಬ್ಬ ಪತ್ರಕರ್ತನಿದ್ದ. ಪತ್ರಕರ್ತ ಅಳಿಯನೊಂದಿಗೆ ದೇಶವಿದೇಶದ ಸುದ್ದಿಗಳನ್ನು, ಓದಿದ್ದನ್ನು ವಿಮರ್ಶಿಸುತ್ತಿದ್ದರು. ಎಡಬಲದ ಗೊಂದಲವಿಲ್ಲದ ದೇಶಪ್ರೇಮಿಯೂ ಇದ್ದ. ನಾನು ಉದಯ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತದ್ದ ಹೊತ್ತಿನಲ್ಲಿ ನನಗೆ ಅನುಕೂಲವಾಗಲೆಂದು ವರ್ಷದ ಕಾಲ ಅಪ್ಪ ನನ್ನೊಂದಿಗೆ ಬೆಂಗಳೂರಿನಲ್ಲಿದ್ದರು. ಆಗ ಇದ್ದ ಒಂದೇ ಒಂದು ಮಾಲ್ ಆದ ಫೋರಂಗೆ ಹೋಗಿದ್ದಾಗ ಅದನ್ನು ಬೆರಗಿನಿಂದ ನೋಡಿದ್ದರು. ನನ್ನ ಮಗಳಿಗೆ ಮಾತ್ರವಲ್ಲ ಅಕ್ಕನ, ಅಣ್ಣನ ಮಕ್ಕಳಿಗೆ ಹಿಂದಿ ಬೋಧಕರಾಗಿದ್ದರು ಅಪ್ಪ. ಅವರಲ್ಲಿ ಮೊಮ್ಮಕ್ಕಳೊಂದಿಗೆ ಬೆರೆಯುವ ಸಹೃದಯಿ ಮಿತ್ರನಿದ್ದ, ಎಲ್ಲಕ್ಕೂ ಹೆಚ್ಚು ನಿರ್ಮೋಹವನ್ನು ಹೇಳಿಕೊಟ್ಟ ಗುರುವಿದ್ದ. ಇಷ್ಟೆಲ್ಲ ಆಗಿದ್ದ ಅಪ್ಪ, ಅಮ್ಮನಲ್ಲಿ ಮಾತ್ರ ಟಿಪಿಕಲ್ ಗಂಡ ಆಗಿದ್ದರು. ಅಷ್ಟೂ ಸಿಟ್ಟನ್ನು ಅಮ್ಮನ ಮೇಲೆ ತೆಗೆಯುವ ಸಾಮಾನ್ಯ ಗಂಡನ ಮನಸ್ಥಿತಿಯಿಂದ ಹೊರತಾಗಿರಲಿಲ್ಲ.
ಹುಟ್ಟನ್ನು ಸಂಭ್ರಮಿಸುವ, ಸಾವಿಗೆ ಮರುಗುವ ನಾವು, ಸಾವು ಹೇಳದೇ ಬಾಗಿಲು ತಟ್ಟುವ ಅತಿಥಿ ಎಂದೇ ಎಂದುಕೊಳ್ಳುತ್ತೇವೆ. ಆದರೆ ಅಪ್ಪನ ವಿಷಯದಲ್ಲಿ ಅದು ಹೇಳದೇ ಬಾಗಿಲು ತಟ್ಟಿದ್ದಲ್ಲ. ಕಳೆದ ಆರು ತಿಂಗಳಿಂದ ಅಪ್ಪ ತಮ್ಮ ಕೊನೆಯ ಪ್ರಯಾಣ ಆರಂಭಿಸಿದ್ದರು. ನಾವು ಮೂಕ ಪ್ರೇಕ್ಷಕರಾಗಿದ್ದೇವು ಅಷ್ಟೇ. ಈ ಪ್ರಯಾಣದಲ್ಲೇ ಅವರು ವರ್ಷದ ಚೌತಿ, ಮೊಮ್ಮಗಳ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಜ್ಜ, ಪ್ರಾಯಶಃ ಮುತ್ತಜ್ಜನ ಕಾಲದಿಂದಲೂ ಮೂ¯ಮನೆಯಾದ ನಮ್ಮಲ್ಲಿ ಚೌತಿಯ ಗಣಪನಿಗೆ ಹಬ್ಬ. ಅಜ್ಜನ ಯಾದಿಯಲ್ಲಿ ಬರುವ ಎಲ್ಲ ಫಡ್ಕೆ ಕುಟುಂಬಸ್ಥರು ಭಾಗಿಯಾಗೋದು ತಲೆತಲಾಂತರದಿಂದ ಬಂದ ಸಂಪ್ರದಾಯ. ಗಣಪನನ್ನು ತರುವ ಗಳಿಗೆಯಿಂದ ಹಿಡಿದು ವಿಸರ್ಜನೆ ಮಾಡುವ ತನಕದ ಪ್ರತಿಯೊಂದು ಕರ್ಮಾಂಗಗಳು ದಶಕಗಳ ಕಾಲದಿಂದಲೂ ಚೌತಿಪೂಜೆ ಮಾಡಿದ ಅಪ್ಪನಿಗೆ ನೆನಪಿರುತ್ತಿದ್ದವು. ಭೂತದ ಕೋಲದ ಫಾರಿಯೂ ಅಪ್ಪನಿಗೆ ನೆನಪಿತ್ತು. ಅಂತಹ ಅಪ್ಪ ಮತ್ತಿನ ದಿನಗಳಲ್ಲಿ ಒಂದೊಂದೇ ನೆನಪಿನ ಸಂಚಿಗಳನ್ನು ಕಳೆದುಕೊಳ್ಳುತ್ತಾ ಹೋದರು. `ಅಲ್ಲಿ ನೋಡು ನಾಲ್ಕು ಜನ ನಿಂತಿದಾರೆ’ ಎಂದು ಶುರುವಾಗುತ್ತಿದ್ದ ಪ್ರಯಾಣದ ದಿನಗಳಲ್ಲಿ ನಿಧಾನಕ್ಕೆ ನೆನಪಿನ ಶಕ್ತಿ, ಮಾತು, ದೃಷ್ಟಿ ಹೀಗೆ ಒಂದೊಂದೇ ಕಳಕೊಳ್ಳುತ್ತಾ ಸಾಗಿದರು. ಕೊನೆಗೆ ಉಸಿರನ್ನೂ ಕೂಡಾ.. ನನ್ನ ಕಣ್ಣೆದುರಿನಲ್ಲೇ!
ನಿಜ, ಅಪ್ಪ ದೊಡ್ಡ ಸಾಧಕನಲ್ಲ ಇರಬಹುದು; ಆದರೆ ಒಮ್ಮೊಮ್ಮೆ ದೊಡ್ಡ ಸಾಧಕರಿಗೆ ಇಲ್ಲದ ಗುಣವಿಶೇಷಗಳು ಸಾಮಾನ್ಯರಲ್ಲಿ ಮನೆಮಾಡಿರುತ್ತವೆ. ಸುಖ, ದುಃಖ, ದ್ವೇಷ, ಅಸೂಯೆ ಹೀಗೆ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದ, ಮುಕ್ತ ಮನಸ್ಸಿನ, ಅತ್ಯಂತ ಕಡಿಮೆ ಅಗತ್ಯಗಳೊಂದಿಗೆ ಬದುಕಿದ ನನ್ನಪ್ಪನ ನಿರ್ಮೋಹತ್ವವೇ ದೊಡ್ಡ ಪಾಠವಾಗಿ ಕಾಣುತ್ತಿದೆ. ಹಾಗೂ ಅವರನ್ನು ಅದೇ ನಿರ್ಮೋಹತ್ವ ವಿಶೇಷವಾಗಿಸಿದೆ ಕೂಡ…..

Latest News

Related Posts