ಮೂಡುಬಿದಿರೆ: ದೇಶದಲ್ಲಿ ಪ್ರಥಮವಾಗಿ ಮಾರ್ಚ್ 22ರಂದು ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮೊದಲೇ ಸೆಲೂನುಗಳ ಬಾಗಿಲು ಮುಚ್ಚಿಸುವ ಆದೇಶವನ್ನು ಸರಕಾರ ಹೊರಡಿಸಿತ್ತು. ಬಹುತೇಕ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿರುವ ಭಂಡಾರಿ ಸಮಾಜದ ಹಲವು ಕುಟುಂಬಗಳು ಇದರಿಂದಾಗಿ ಉಪವಾಸ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂಡುಬಿದಿರೆ ಫಿರ್ಕಾದಲ್ಲಿ ಭಂಡಾರಿ ಸಮಾಜಕ್ಕೆ ಸೇರಿದ 200ಕ್ಕೂ ಹೆಚ್ಚು ಕುಟುಂಬಗಳಿದ್ದು ನಿತ್ಯ ದುಡಿದು ತಿನ್ನುವ ಕೈಗಳಿವು. ತನ್ನದೇ ಸಮಾಜಬಾಂಧವರು ಸರಕಾರದ ಲಾಕ್ ಡೌನ್ ಅದೇಶದಿಂದ ಸಂಕಷ್ಟಕ್ಕೊಳಗಾದಾಗ ನೆರವಿಗೆ ಧಾವಿಸಿರುವ ಇಲ್ಲಿನ ಭಂಡಾರಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಇದುವರೆಗೆ ಹೋಬಳಿಯ ಮೂಲೆಮೂಲೆಗೆ ತೆರಳಿ ತಮ್ಮ ಸಮಾಜದಲ್ಲಿ ಸಂಕಷ್ಟದಿಂದಿರುವ ಸುಮಾರು 120 ಕುಟುಂಬಗಳಿಗೆ ಅಕ್ಕಿ, ದಿನಸಿ ಸಾಮಾನು ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ವಿತರಿಸಿದೆ. ಸಂಘವು ಸಮಾಜ ಬಾಂಧವರಿಂದಲೇ ಸಂಗ್ರಹಿಸಿ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಈ ಸತ್ಕಾರ್ಯಕ್ಕೆ ವಿನಿಯೋಗಿಸಿದೆ. ಸಂಘದ ಅಧ್ಯಕ್ಷ ಕೆ.ಎನ್. ಪ್ರಕಾಶ್ ಭಂಡಾರಿ, ಪದಾಧಿಕಾರಿಗಳಾದ ಪ್ರಕಾಶ್ ಭಂಡಾರಿ, ಸತೀಶ್ ಭಂಡಾರಿ, ಮಾಧವ ಭಂಡಾರಿ, ಯೋಗೀಶ್ ಭಂಡಾರಿ, ಸಂಧ್ಯಾ ಭಂಡಾರಿ, ಶಾಂತ ಭಂಡಾರಿ, ಶ್ರೀದೇವಿ ಭಂಡಾರಿ ಮತ್ತಿತರರು ವೈಯಕ್ತಿಕ ಅಂತರವನ್ನು ಕಾಯ್ದುಕೊಂಡೇ ಈ ಸತ್ಕಾರ್ಯದಲ್ಲಿ ಭಾಗವಹಿಸಿದರೂ; ಕೆಲವರು ಮಾಸ್ಕ್ ಧರಿಸಲು ಉದಾಸೀನ ತೋರಿದ್ದು ಕಂಡುಬಂತು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ 80 ಮನೆಗಳಗೆ ಕೂಡಾ ಆಹಾರ ಧಾನ್ಯ ತಲುಪಿವ ಗುರಿ ಇರಿಸಲಾಗಿದೆ ಎಂದು ಸತೀಶ್ ಭಂಡಾರಿ ತಿಳಿಸಿದ್ದಾರೆ.








