ಮೂಡುಬಿದಿರೆ: ತನ್ನದೇ ತೋಟದಲ್ಲಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನನ್ನು, ಲಾಕ್ ಡೌನ್ ಆದೊಡನೆ ಬೀದಿ ಪಾಲು ಮಾಡುವ ಮಾಲಕನ ನಿರ್ಧಾರದಿಂದಾಗಿ ಇದೀಗ ಕೂಲಿ ಕಾರ್ಮಿಕ ಕ್ವಾರಂಟೈನ್ ಸೇರುವಂತಾದ ಘಟನೆ ಕಲ್ಲಮುಂಡ್ಕೂರಿನಿಂದ ವರದಿಯಾಗಿದೆ.
ಬಿಹಾರಿ ಮೂಲದ ಕೂಲಿ ಕಾರ್ಮಿಕನೊಬ್ಬ ಕಳೆದ ಕೆಲವು ತಿಂಗಳುಗಳಿಂದ ಕಲ್ಲಮುಂಡ್ಕೂರು ಗ್ರಾಮದ ನಿವಾಸಿ ಕೃಷಿಕರೊಬ್ಬರ ಬಳಿ ತೋಟದ ಕೆಲಸ ಮಾಡಿಕೊಂಡಿದ್ದ. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೋಟದ ಮಾಲಕ ಈ ಕೂಲಿಕಾರ್ಮಿಕನಿಗೆ ಮೂಲಸೌಲಭ್ಯ ಒದಗಿಸಲು ಹಿಂದೇಟು ಹಾಕಿದ್ದರೆಂದು ಸ್ವತಹ ಕೂಲಿ ಕಾರ್ಮಿಕ ದೂರಿದ್ದಾನೆ
ಇದೇ ಕಾರಣಕ್ಕೆ ಈತ ಮನೆ-ಮನೆ ಸುತ್ತ ತೊಡಗಿದನೆಂದು ಹೇಳಲಾಗುತ್ತಿದೆ.
ಈ ನಡುವೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಊರೂರು ಸುತ್ತುತ್ತಿದ್ದ ಕೂಲಿ ಕಾರ್ಮಿಕನನ್ನು ಹಿಡಿದು ತಂದು ಮಾಲಕನ ಮನೆಗೆ ತಂದುಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಆದರೆ ಕಾರ್ಮಿಕ ಊರೂರು ಸುತ್ತಿ ಬಂದಿರುವ ಕಾರಣ ಈತನಿಗೆ ಕೊರೊನ ತಗಲಿರಬಹುದೆಂಬ ಭೀತಿಯಿಂದ ಮಾಲಕರು ಮತ್ತೆ ಈತನನ್ನು ಹೊರಗಟ್ಟಿದ್ದರೆಂದು ತಿಳಿದುಬಂದಿದೆ. ಮೂಡುಬಿದಿರೆಯ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಊರೂರು ಅಲೆದಾಡಿದ ಕಾರ್ಮಿಕನನ್ನು ಮುಂಜಾಗ್ರತಾ ಕ್ರಮವಾಗಿ ಕೊರೋನಾ ನಿಗಾ ಘಟಕಕ್ಕೆ ದಾಖಲಿಸಿದ್ದಾರೆ. ಈ ಬಡಪಾಯಿ ಕಾರ್ಮಿಕನನ್ನು ತನಗೆ ಬೇಕಾದಾಗ ದುಡಿಸಿ ಕತ್ತೆ ಚಾಕರಿ ಮಾಡಿಸಿದ ಮಾಲೀಕ, ದೇಶದಲ್ಲಿ ಲಾಕ್ ಡೌನಾದ ಕೂಡಲೇ ಮಾನವೀಯತೆ ಮರೆತು ಕಾರ್ಮಿಕನನ್ನು ಬೀದಿಗೆ ತಳ್ಳಿದ ಬಗ್ಗೆ ಆಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದೀಗ ಮೂಡುಬಿದಿರೆ ನಾಗರಿಕರನ್ನು ಕಾಡುತ್ತಿರುವ ಪ್ರಶ್ನೆ.






