ಕೊರೋನಾ ಸೋಂಕಿನ ವಿರುದ್ಧ ಹೋರಾಟ ಲಾಕ್ ಡೌನ್ ಅಂತಿಮ ಹೋರಾಟವಲ್ಲ – ಆರಂಭ ಮಾತ್ರ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಆಂದೋಲನವಾಗಬೇಕು

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ಕೊರೋನಾ ಸೋಂಕಿನ ಹರಡುವಿಕೆಯ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್ ಡೌನಿಗೆ ಇದೀಗ 40ದಿನಗಳು ಕಳೆಯಿತು. ಇನ್ನು‌ ಮುಂದೆ ಏನು ಎಂಬ ಕುತೂಹಲ ಪ್ರತಿಯೋರ್ವ ಭಾರತೀಯನಲ್ಲಿದೆ. 40ದಿನಗಳ ಸುದೀರ್ಘ ಲಾಕ್ ಡೌನ್ ಹೋರಾಟ ಮಹಾಮಾರಿ ಕೊರೋನಾ ಸೋಂಕನ್ನು ನಮ್ಮ ದೇಶದಿಂದ ಬಡಿದೋಡಿಸಬಹುದಾ…ನಾವಿನ್ನು ನೆಮ್ಮದಿಯಾಗಿ‌ ಮೊದಲಿನಂತೆ ಓಡಾಡಿಕೊಂಡಿರಬಹುದಾ…ಮುಂತಾದ ಪ್ರಶ್ನೆಗಳು ಎಲ್ಲರ ಮನದಲ್ಲಿ ಹರಿದಾಡುತ್ತಿದೆ. ಇದಕ್ಕೆಲ್ಲಾ ಒಂದೇ ಉತ್ತರ ‘ ಕೊರೋನಾ ಸೋಂಕಿನ‌ ವಿರುದ್ಧ ಲಾಕ್ ಡೌನ್ ಅಂತಿಮ ಹೋರಾಟವಲ್ಲ, ಇದು ಹೋರಾಟದ ಆರಂಭ ಮಾತ್ರ’.
ಕೊರೋನಾ ಸೋಂಕು ಜಗತ್ತಿನಿಂದ ನಿರ್ಮೂಲನವಾಗಬೇಕಾದರೆ ಸರಿಯಾದ ಔಷಧಿ ಹಾಗೂ ಲಸಿಕೆ ಕಂಡುಹಿಡಿದು, ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಲಭ್ಯವಾಗಿ, ಸದ್ಬಳಕೆಯಾಗಬೇಕು. ಅಲ್ಲಿಯವರೆಗೆ ಈ ಮಹಾ ಹೆಮ್ಮಾರಿ ನಮ್ಮ ಮಧ್ಯೆ ಇದ್ದೇ ಇರುತ್ತದೆ. ಸೂಕ್ತ ಮುಂಜಾಗ್ರತಾ ಕ್ರಮಗಳಿಂದ ಕೊರೋನಾ ಸೋಂಕನ್ನು ಹತೋಟಿಯಲ್ಲಿಡಬಹುದು.
ಲಾಕ್ ಡೌನ್ ಅವಧಿಯು ಕೊರೋನಾ ಸೋಂಕಿನ ವಿರುದ್ಧ ಸೂಕ್ತ ಮುಂಜಾಗ್ರತೆ ಕೈಗೊಳ್ಳಲು; ಈ ಮುಂಜಾಗ್ರತಾ ಕ್ರಮಗಳಿಗೆ ನಮ್ಮನ್ನು ಒಗ್ಗಿಸಿಕೊಳ್ಳಲು ಇರುವ ಪ್ರೊಬೆಷನರಿ ಅವಧಿ. ಈ ಅವಧಿಯಲ್ಲಿ ಸರಕಾರ ಹೇಳಿದ ಮುಂಜಾಗ್ರತಾ ಕ್ರಮಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಮುಂದಿನ ದಿನಗಳಲ್ಲಿ ನಮ್ಮ ಬದುಕಿನುದ್ದಕ್ಕೂ ಈ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸಂಕಲ್ಪ ಮಾಡಬೇಕು. ಅದ್ದರಿಂದಲೇ ನಾನು ಹೇಳಿದ್ದು ಕೊರೋನಾ ಸೋಂಕಿನ ವಿರುದ್ಧ ಲಾಕ್ ಡೌನ್ ಅಂತಿಮ ಹೋರಾಟವಲ್ಲ; ಇದು ಆರಂಭ‌ ಮಾತ್ರ ಎಂದು.
ಸರಕಾರ ಲಾಕ್ ಡೌನ್ ಅವಧಿ ಎಷ್ಟು ವಿಸ್ತರಿಸುತ್ತದೆ ಎಂಬುವುದು ಮುಖ್ಯವಲ್ಲ. ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಈ ಲಾಕ್ ಡೌನ್ ಅವಧಿಯಲ್ಲಿ ಸರಕಾರ ಹೇಳಿದ ಮುಂಜಾಗ್ರತಾ ಕ್ರಮಗಳಿಗೆ ನಾವೆಷ್ಟು ಒಗ್ಗಿಕೊಂಡು ಪಾಲಿಸುತ್ತಿದ್ದೇವೆ ಎಂಬುದು ಮುಖ್ಯ. ಕೊರೋನಾ ಸೋಂಕಿನ ವಿರುದ್ಧ ಮನುಕುಲ ಸುದೀರ್ಘ ಹೋರಾಟ ನಡೆಸಬೇಕಿದೆ. ಮಾಸ್ಕ್ ಧರಿಸುವುದು ಹಾಗೂ ವೈಯಕ್ತಿಕ ಅಂತರ ಕಾಪಾಡುವುದರ ಜೊತೆಗೆ ಶುಚಿತ್ವಕ್ಕೆ ಮಹತ್ವ ನೀಡಿದರೆ ಮಾತ್ರ ನಾವು ಕೊರೋನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ. ಇದನ್ನು ನಾವೆಷ್ಟು ಅರ್ಥೈಸಿಕೊಂಡು ಪಾಲಿಸುತ್ತಿದ್ದೇವೆ ಎಂಬುವುದು ಮುಖ್ಯ. ಲಾಕ್ ಡೌನ್ ಸುದೀರ್ಘ ಅವಧಿಗೆ ಹೇರಲು ಯಾವ ದೇಶದಿಂದಲೂ ಸಾಧ್ಯವಿಲ್ಲ, ಇದಕ್ಕೆ ಭಾರತವೂ ಹೊರತಲ್ಲ.
ಪ್ರಸ್ತುತ ದೇಶದಲ್ಲಿ ಸರಕಾರ ಹೇರಿದ ಲಾಕ್ ಡೌನನ್ನು ರಾಷ್ಟ್ರದ 90% ನಾಗರಿಕರು ಪಾಲಿಸಿದ್ದರಿಂದ ದೇಶದಲ್ಲಿ‌ಕೊರೋನಾ ಸೋಂಕಿನ ವೇಗಕ್ಕೆ ಬಲವಾದ ತಡೆ ಬಿದ್ದಿದೆ ಎನ್ನಲು ನಮ್ಮ ದೇಶದ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ವಿಶ್ವದ ಇತರ ದೇಶಗಳ ಕೊರೋನಾ ಸೋಂಕಿತರ ಸಂಖ್ಯೆಗಳು ಪ್ರತ್ಯಕ್ಷ ಉದಾಹರಣೆಗಳು. ಕಳೆದ ಎರಡು ತಿಂಗಳ ಅವಧಿಯಲ್ಲಿ ಅಮೇರಿಕಾದಲ್ಲಿ 10ಲಕ್ಷಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿನಿಂದ ಪೀಡಿತರಾದರೆ; ಇಟಲಿಯಲ್ಲಿ 2ಲಕ್ಷಕ್ಕೂ ಅಧಿಕ‌ ಮಂದಿ, ಬ್ರಿಟನಿನಲ್ಲಿ 1,70,000ಕ್ಕೂ ಅಧಿಕ‌ ಮಂದಿ, ಸ್ಪೇನಿನಲ್ಲಿ 2,13,000ಕ್ಕೂ ಅಧಿಕ ಮಂದಿ…ಹೀಗೆ ವಿಶ್ವದಲ್ಲಿ 32ಲಕ್ಷಕ್ಕೂ ಅಧಿಕ‌ ಮಂದಿ ಕೊರೋನಾ ಸೋಂಕು‌ಪೀಡಿತರಾದರೆ; ಭಾರತದಲ್ಲಿ‌ ಮಾತ್ರ ಇದುವರೆಗೆ 35,000ಮಂದಿ‌ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಭಾರತ ಕೊರೋನಾ ಸೋಂಕು ಹರಡುವಿಕೆಯ ವೇಗಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ ಎನ್ನಲು ಈ ಅಂಕಿಅಂಶಗಳೇ ಸಾಕ್ಷಿ. ಇದಕ್ಕೆ ಪ್ರಮುಖ ಕಾರಣ ಭಾರತೀಯರು ಲಾಕ್ ಡೌನ್ ಸಂದರ್ಭ ಪಾಲಿಸಿದ ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಧಾರಣೆ.
ಕೊರೋನಾ ಸೋಂಕು ಹರಡದಂತೆ ತಡೆಯಲು ದೇಶದಲ್ಲಿ‌ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವುದು ಒಂದು ಆಂಧೋಲನವಾಗಬೇಕು. ಈ ಉದ್ಧೇಶಕ್ಕಾಗಿಯೇ ನಮ್ಮೂರಲ್ಲಿ‌ ನಡೆಯುತ್ತಿರುವ ಆಹಾರ ಕಿಟ್ ವಿತರಣೆ ಸಹಿತ ಎಲ್ಲ ಕಾರ್ಯಕ್ರಮಗಳಲ್ಲಿ ಸಂಘಟಕರು ಅಥವಾ ಅಭ್ಯಾಗತರು ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಾಡದೇ ಭಾಗವಹಿಸಿದರೆ ಅದನ್ನು ವರದಿ ಮಾಡುತ್ತಾ ಬಂದಿದೆ. ಪತ್ರಿಕೆ ಆರಂಭಿಸಿದ ಈ ಜಾಗೃತಿ ಒಂದು ಜನಾಂದೋಲನವಾಗಬೇಕು. ಓದುಗರಾದ ನೀವು ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ನಿಮ್ಮೂರಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ತಿರುಗಾಡುವ, ಕಾರ್ಯಕ್ರಮಗಳಲ್ಲಿ ವೈಯಕ್ತಿಕ ಅಂತರ ಕಾಪಾಡದೇ-ಮಾಸ್ಕ್ ಧರಿಸದೇ ಭಾಗವಹಿಸುವವರಿಗೆ ಸೂಕ್ತ ತಿಳುವಳಿಕೆ ನೀಡುವುದರ ಜೊತೆಗೆ, ಅಂತಹ ಕಾರ್ಯಕ್ರಮಗಳ ಸಚಿತ್ರ ವರದಿಯನ್ನು ವಾಟ್ಸಾಪಿನ ಮೂಲಕ ನಮಗೆ ಕಳುಹಿಸಿಕೊಡಿ. ನಾವು-ನೀವು ಸೇರಿ ನಾಡಿನಲ್ಲಿ‌ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸೋಣಾ; ಇತರರೂ‌ ಮುಂಜಾಗ್ರತೆ ವಹಿಸುವಂತೆ ಎಚ್ಚರಿಸೋಣಾ. ಆ ಮೂಲಕ ಕೊರೋನಾ ಸೋಂಕಿನ ವಿರುದ್ಧದ ಸುದೀರ್ಘ ಹೋರಾಟದಲ್ಲಿ ಅಂತಿಮ ವಿಜಯದ ನಗೆ ಬೀರೋಣಾ…

Latest News

Related Posts