
ಬೆಳ್ತಂಗಡಿ: ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ಪಲ್ಗುಣಿ ನದಿಗೆ ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ.ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣ ವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯ ಎದುರಾಗಿದ್ದು, ಸುತ್ತಮುತ್ತಲಿನ ಜನ ಭಯಬೀತರಾಗಿದ್ದಾರೆ. ಪ್ರಾಣಿ ಪಕ್ಷಿಗಳು ಈ ವಿಷಯುಕ್ತ ನೀರನ್ನೆ ಕುಡಿಯುತ್ತಿದ್ದು ಅವುಗಳ ಪ್ರಾಣಕ್ಕೂ ಸಂಚಕಾರ ಬಂದೊದಗಿದೆ. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿದ್ದು ಅವುಗಳೂ ಕೂಡ ಸಾಯುವ ಭೀತಿ ವ್ಯಕ್ತವಾಗುತ್ತಿದೆ. ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ದುಷ್ಕೃತ್ಯ ಯಾರೇ ಮಾಡಿರಲಿ, ಅವರಿಗೆ ತಕ್ಕ ಶಿಕ್ಷೆಯಾಗಬೇಕು, ಒಂದು ವೇಳೆ ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.ಸ್ಥಳೀಯ ಒಂದು ತಂಡದ ಮೇಲೆ ಸಂಶಯ ವ್ಯಕ್ತ ಪಡಿಸಿದ ಸ್ಥಳೀಯರು ಆ ತಂಡವನ್ನು ಸರಿಯಾಗಿ ವಿಚಾರಿಸಿದರೆ ಸತ್ಯ ಹೊರಬರಬಹುದು ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.ಅದೇ ರೀತಿ ನಿನ್ನೆ ಈ ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿದರೂ, ಪೊಲೀಸರು ಆಸಡ್ಡೆ ತೋರಿದ್ದು ಸ್ಥಳೀಯರನ್ನು ಕೆರಳಿಸಿದೆ. ಈ ಬಗ್ಗೆ ಶಾಸಕ ಹರೀಶ್ ಪೂಂಜ ಗಮನಕ್ಕೆ ತಂದ ಸ್ಥಳೀಯರಿಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.








