
ಮೇ 2 ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟರಿಗೆ ವಿವಾಹ ದಿನದ ಸಂಭ್ರಮ. ಈ ಸಂಭ್ರಮವನ್ನು ಲಯನ್ಸ್ ಕ್ಲಬ್ಬಿನ ಸೇವಾಪಥದಲ್ಲಿಯೇ ಆಚರಿಸಿಕೊಂಡ ವಸಂತ ಶೆಟ್ಟಿ, ಬೆಳಿಗ್ಗೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ 12ಅರ್ಹ ಫಲಾನುಭವಿಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಹಸಿದವರ ಹೊಟ್ಟೆಗೆ ಹಿಟ್ಟು ನೀಡಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸೇವಾಪಥದ ಮುಂದುವರಿದ ಭಾಗವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಮತ್ತೆ ಕ್ಲಬ್ಬಿನ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟರೊಂದಿಗೆ ಭೇಟಿ ನೀಡಿದ ಅಧ್ಯಕ್ಷ ವಸಂತ ಶೆಟ್ಟಿ, ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಿಸಿ, ಕೊರೋನಾ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಫೇಸ್ ಶೀಲ್ಡ್ ಮಾಸ್ಕ್ ಹಸ್ತಾಂತರಿಸುವ ಸಂದರ್ಭ ಮಾತ್ರವಲ್ಲದೇ, ಬೆಳಿಗ್ಗೆ ಆಹಾರದ ಕಿಟ್ ವಿತರಿಸುವಾಗಲೂ ಅಧ್ಯಕ್ಷ ವಸಂತ ಶೆಟ್ಟಿ ಹಾಗೂ ಕಾರ್ಯದರ್ಶಿ ಲಾಯ್ಲ ಸುರೇಶ್ ಶೆಟ್ಟಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡುವ ಮೂಲಕ ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.








