ಬೆಳ್ತಂಗಡಿ: ಇಂದಿನ ಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು. ಈಗಿನ ಬಿರುಬಿಸಿಲಲ್ಲಿ ಅದೂ ಗ್ರಾಮೀಣ ಪ್ರದೇಶದಲ್ಲಿ ಅವರು ಮನೆ ಮನೆಗೆ ತೆರಳಿ ಆರೋಗ್ಯ ಮಾಹಿತಿ ಸಂಗ್ರಹಿಸುವುದು ಸಾಹಸವೇ ಸರಿ.
ಇವರ ಸಂಕಷ್ಟನ್ನು ಅರಿತ ಸಹೃದಯಿ ನಾಗರಿಕರು ಕಾರ್ಯಕರ್ತೆಯರಿಗೆ ಮನೆ ಮನೆಗೆ ತೆರಳಲು ರಿಕ್ಷಾಗಳ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಳದಂಗಡಿ ಸುತ್ತಲಿನ 11 ಗ್ರಾಮಗಳಿಗೆ ಸಂಬಂಧ ಪಟ್ಟಂತೆ ಜನಸ್ನೇಹಿ-ಪೋಲಿಸ್ ಎಂಬ ಗುಂಪನ್ನು ರಚಿಸಿಕೊಂಡು ಅಳದಂಗಡಿ ಸಮುದಾಯ ಕೇಂದ್ರಕ್ಕೆ ಸಂಬಂಧಪಟ್ಟ 15 ಆಶಾ ಕಾರ್ಯಕರ್ತೆಯರಿಗೆ ಮನೆಯಿಂದ ಹಳ್ಳಿಗಳಿಗೆ ತೆರಳಲು ಆಟೋ ರಿಕ್ಷಾಗಳನ್ನು ನಿಗದಿಗೊಳಿಸಿ ಅವರ ಕಷ್ಟವನ್ನು ಕಡಿಮೆ ಮಾಡಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಈ ವ್ಯವಸ್ಥೆ ಲಾಕ್ ಡೌನ್ ಆರಂಭದಿಂದ ಇದ್ದು ಮುಗಿಯುವ ತನಕ ಮುಂದುವರಿಯಲಿದೆ ಎನ್ನುತ್ತಾರೆ ಗುಂಪಿನ ಸದಸ್ಯರು. ಇದಕ್ಕೆ ತಗಲುವ ಸುಮಾರು ರೂ.60,000 ನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ. ರಿಕ್ಷಾ ಚಾಲಕರು ಕೂಡಾ ಏಕಮನಸ್ಸುಗಳಿಂದ ಮಾನವೀಯ ಕಾರ್ಯಕ್ಕೆ ಸ್ಪಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರೆಲ್ಲರಿಗೂ ದಿನವಹಿಗಾಗುವ ಅಕ್ಕಿ ಇತ್ಯಾದಿಗಳನ್ನೂ ವಿತರಿಸಿದ್ದಾರೆ. ಅಳದಂಗಡಿ ಗ್ರಾ.ಪಂ.ಅಧ್ಯಕ್ಷ ಸತೀಶ್, ಬೀಟ್ ಪೋಲಿಸ್ ಪ್ರಶಾಂತ, ಡಾ. ಶಶಿಧರ ಡೋಂಗ್ರೆ, ಶಿವಪ್ರಸಾದ ಅಜಿಲ, ವಿಶ್ವನಾಥ ಬಂಗೇರ, ಚಂದ್ರಶೇಖರ, ದೇವದಾಸ್, ಹಿಂದೂ ಯುವಶಕ್ತಿಯ ಕಾರ್ಯಕರ್ತರು, ಅಳದಂಗಡಿ-ಸುಲ್ಕೇರಿ ಪಿಡಿಓಗಳು ಮತ್ತಿತ್ತರರು ಬೆಂಬಲವಾಗಿ ನಿಂತಿದ್ದಾರೆ.








