ಇಂಟರ್ ನ್ಯಾಶನಲ್ ಫ್ರೀಡಂ ಆಫ್ ಪ್ರೆಸ್ ಡೇ (ಅಂತರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನ)ಯಾದ ಮೇ 3ರಂದು ಬೆಳ್ತಂಗಡಿಯ ಪ್ರೆಸ್ ಕ್ಲಬ್ಬಿನ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಬೆಳ್ತಂಗಡಿ ಪ್ರಸ್ ಕ್ಲಬ್ಬಿಗೆ ಕೊಡುಗೆಯಾಗಿ ಸ್ಯಾನಿಟೈಸರ್ ಸ್ಟ್ಯಾಂಡನ್ನು ಹಾಗೂ ಪತ್ರಕರ್ತರಿಗೆ ವೈಯಕ್ತಿಕ ಬಳಕೆಗೆ ಸ್ಯಾನಿಟೈಸರ್ ಬಾಟಲಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕೊರೋನಾ ಸೋಂಕಿನ ಹರಡುವಿಕೆಯ ಭೀತಿಯಿರುವ ಇಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಕೂಡಾ ಕೊರೋನಾ ವಾರಿಯರ್ಸ್, ಫೀಲ್ಡಿಗೆ ಇಳಿದು ವರದಿ ಮಾಡುವ ನಿಮ್ಮ ಕ್ಷೇಮ ರಕ್ಷಣೆಯೂ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಇಂಟರ್ ನ್ಯಾಷನಲ್ ಫ್ರೀಡಂ ಆಫ್ ಪ್ರಸ್ ಡೇಯ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ವೈಯಕ್ತಿಕ ಸ್ಯಾನಿಟೈಸರ್ ಬಾಟಲಿ ನೀಡುವುದರ ಜೊತೆಗೆ ಪ್ರಸ್ ಕ್ಲಬ್ಬಿಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರಸ್ ಕ್ಲಬ್ಬಿನಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಗಳ ಸಂದರ್ಭ ಪತ್ರಕರ್ತರಿಗೆ ಹಾಗೂ ಪತ್ರಿಕಾಗೋಷ್ಠಿ ನಡೆಸುವವರಿಗೆ ಶುಚಿತ್ವ ಕಾಪಾಡಿ ಕೊರೋನಾ ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಈ ಸ್ಯಾನಿಟೈಸರ್ ಸ್ಟ್ಯಾಂಡ್ ಪ್ರಯೋಜನಕಾರಿಯಾಗಲಿದೆ. ಪ್ರೆಸ್ ಕ್ಲಬ್ಬಿಗೆ ಈ ಸೌಕರ್ಯ ಒದಗಿಸಿ, ಪತ್ರಕರ್ತರ ಬಗ್ಗೆ ಕಾಳಜಿ ತೋರಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸರ್ವಸದಸ್ಯರಿಗೆ ಪತ್ರಕರ್ತರ ಸಂಘ ಪರವಾಗಿ ಕಾರ್ಯದರ್ಶಿ ಮನೋಹರ್ ಬಳಂಜ ಕೃತಜ್ಞತೆ ಸಲ್ಲಿಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯರಾಮ್, ನಿಯೋಜಿತ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ನಿಯೋಜಿತ ಕಾರ್ಯದರ್ಶಿ ಶ್ರೀಧರ್ ಕೆ. ವಿ., ಸದಸ್ಯ ಡಾl ಗೋವಿಂದ ಕಿಶೋರ್; ಪತ್ರಕರ್ತರ ಸಂಘದ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಬಿ. ಎಸ್. ಕುಲಾಲ್, ಗಣೇಶ್ ಪೂಜಾರಿ, ಧನಕೀರ್ತಿ ಆರಿಗ, ದೇವಿಪ್ರಸಾದ್, ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಹಾಜರಿದ್ದರು.








