ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಅನುಭವ ಕಥನ

ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಅನುಭವ ಕಥನ
Facebook
Twitter
LinkedIn
WhatsApp

ಪ್ರಸ್ತುತ ಉಜಿರೆಯಲ್ಲಿ ಕೃಷಿಕರಾಗಿ ನೆಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾಂಚೋಡಿನವರಾದ ಗೋಪಾಲಕೃಷ್ಣ ಅವರು ಹದಿನೆಂಟು ವರ್ಷಗಳ ಕಾಲ ಭಾರತೀಯ ಭೂಸೇನೆಯ ಫಿರಂಗಿ ದಳದಲ್ಲಿ ಕೆಲಸ ಮಾಡಿದವರು.ಅವರ ಸೈನಿಕ ಅನುಭವಗಳ ಬಗ್ಗೆ ಅರವಿಂದ ಚೊಕ್ಕಾಡಿಯವರು ಬರೆಯುತ್ತಿರುವ ಪುಸ್ತಕ ‘ ಕ್ಷಮತೆ’ಯನ್ನು ವಿಜಯಪುರದ ಚಾಣಕ್ಯ ಪ್ರಕಾಶನದವರು ಪ್ರಕಟಿಸುತ್ತಿದ್ದು,ಈ ಕೃತಿಯು ಪೂರ್ಣಗೊಂಡಿದ್ದರೂ;ಕೋವಿಡ್-19ರ ಕಾರಣದಿಂದ ಇದೇ ಜೂನ್ ತಿಂಗಳಲ್ಲಿ ಓದುಗರ ಕೈ ಸೇರುವ ನಿರೀಕ್ಷೆ ಇದೆ.

ಶ್ರೀಲಂಕಾದ ಶಾಂತಿಪಾಲನಾ ಪಡೆಯ ಕಾರ್ಯಾಚರಣೆ,ಕಾಶ್ಮೀರದ ಕಾರ್ಯಾಚರಣೆ,ಜೋಝಿಲಾ ಪಾರ್ ಕಾರ್ಯಾಚರಣೆ,ಚೀನಾದ ಗಡಿ ಪ್ರದೇಶದ ನಿರ್ಮಾಣ ಕಾರ್ಯ,ಅಸ್ಸಾಂ ಕಾರ್ಯಾಚರಣೆ,ಲಾಥೂರ್ ಭೂಕಂಪ ಸಂರಕ್ಷಣಾ ಕಾರ್ಯಾಚರಣೆಗಳಲ್ಲೆಲ್ಲ ಭಾಗವಹಿಸಿದ್ದ ಗೋಪಾಲ ಕೃಷ್ಣ ಅವರು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ವೈಜ್ಞಾನಿಕ ಕಾರ್ಯನಿರ್ವಹಣೆಗೆ ಬಂದಾಗ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯವರಾಗಿದ್ದಾಗ ಅವರಿಗೆ ಅಂಗರಕ್ಷರಾಗಿಯೂ ಕೆಲಸ ಮಾಡಿದ್ದರು.ನೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರಿಂದ ಜನರಿಗೆ ಸುಲಭವಾಗಿ ಗೊತ್ತಾಗದ ಸೈನಿಕ ಕಾರ್ಯಗಳ ಸೂಕ್ಷ್ಮ ಸಂಗತಿಗಳ ಅನುಭವವನ್ನು ಪುಸ್ತಕವು ಒಳಗೊಂಡಿದೆ.

ಆದರೆ ಪುಸ್ತಕವು ಸೈನಿಕ ಅನುಭವಕ್ಕಷ್ಟೆ ಸೀಮಿತವಾಗಿಲ್ಲ.ಸಮಾಜ ಸೇವಕನಾಗಿ ಗೋಪಾಲಕೃಷ್ಣರ ಇನ್ನೊಂದು ವ್ಯಕ್ತಿತ್ವವನ್ನು ಪರಿಚಯಿಸುವುದರೊಂದಿಗೆ ಸಮಾಜವು ಸೈನಿಕ ಅನುಭವಗಳನ್ನು ಬಳಸಿಕೊಂಡಾಗ ಸಮಾಜಕ್ಕೆ ಆಗುವ ಅನುಕೂಲತೆಗಳೇನು ಎಂಬುದನ್ನೂ ಹೇಳುತ್ತದೆ.

ಗೋಪಾಲಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರ ಅನುಭವಗಳನ್ನೂ ಪುಸ್ತಕವು ಒಳಗೊಂಡಿದ್ದು ಸೈನಿಕ ಜೀವನವು ಕುಟುಂಬದ ಸದಸ್ಯರಲ್ಲಿ ಹುಟ್ಟು ಹಾಕುವ ಮನಸ್ಥಿತಿಯನ್ನು ಹೇಳುತ್ತಾ ಒಬ್ಬ ಸೈನಿಕನನ್ನು ನಮ್ಮಲ್ಲೊಬ್ಬನಾದ ವ್ಯಕ್ತಿಯಾಗಿ ಕೃತಿಯು‌ ನಿರೂಪಿಸುತ್ತದೆ.ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿರುವ ಹಿರಿಯ ಲೇಖಿಕೆ ಸಾರಾ ಅಬೂಬಕ್ಕರ್ ಅವರು,”ಸೈನಿಕರ ಬಗ್ಗೆ ನಮಗಿರುವುದು ಕಲ್ಪನೆಗಳು ಮಾತ್ರ.ನಿಜವಾಗಿಯೂ ಸೈನಿಕರು ಹೇಗಿರುತ್ತಾರೆ,ಅವರ ಕರ್ತವ್ಯಗಳು,ಯಾತನೆಗಳು,ಕಷ್ಟಗಳು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ.ಈ ಕೃತಿಯಲ್ಲಿ ಅವು ಗೊತ್ತಾಗುತ್ತವೆ”ಎಂದಿರುವ ಮಾತುಗಳಲ್ಲಿ ಈ ಅಂಶವನ್ನು ಗಮನಿಸಬಹುದು.

ಕೃತಿಯು ಗೋಪಾಲಕೃಷ್ಣ ಅವರ ಅನುಭವದೊಂದಿಗೆ ಪಂಜಾಬ್ ನ ಬ್ರಿಗೇಡಿಯರ್ ಜಸ್ವಂತ್ ಸಿಂಗ್ ಅಲಗ್,ಮೇಜರ್ ಜನರಲ್ ರವೀಂದ್ರ ಸಿಂಗ್ ಛೋಪ್ರಾ,ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ಶೇಷನಾರಾಯಣ,ಕ್ಯಾಪ್ಟನ್ ವಸಂತ ಕಾಯರ್ಮಾರ್,ನೌಕಾ ದಳದ ಶ್ರೀಕೃಷ್ಣ ಭಟ್ ಎಸ್,ವಾಯುದಳದ ಎಮ್.ಆರ್.ಜೈನ್ ಮುಂತಾದ ಮಾಜಿ ಸೇನಾಧಿಕಾರಿಗಳ/ಸೈನಿಕರ ಅನುಭವಗಳು ಮತ್ತು ಅವರು ಗೋಪಾಲಕೃಷ್ಣ ಅವರನ್ನು ಕಂಡ ಬಗೆಯನ್ನು ಒಳಗೊಂಡಿದ್ದು ಕೃತಿಯು ಅದರ ತಾತ್ವಿಕತೆಯಲ್ಲಿ ಅನೇಕ ಸೈನಿಕರ ಅನುಭವಗಳನ್ನು ಪ್ರತಿನಿಧಿಸಿದೆ.”ರೊಚ್ಚಿಗೇಳದೆ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಮೆಂಟಲ್ ಫಿಟ್ ನೆಸ್-ಇಂತಹ ವಿಚಾರಗಳು ಮರೆಯಲಾಗದಂತೆ ಮನಸಿನಲ್ಲಿ ಉಳಿದು ಬಿಡುತ್ತವೆ.ಹಾಗಾಗಿ ಇದು ಸೈನಿಕ ಅನುಭವ ಮಾತ್ರವಲ್ಲ.ಬದುಕಿನ ಪ್ರೇರಕ ಕಥನವೂ ಆಗಿದೆ”ಎಂದು ಮುನ್ನುಡಿಯಲ್ಲಿ ಹೇಳಿರುವ ಹಿರಿಯ ವಿಮರ್ಶಕ ಡಾ.ಬಿ.ಜನಾರ್ದನ ಭಟ್ ಅವರ ಮಾತುಗಳಲ್ಲಿ ಕೃತಿಯ ಸಮಗ್ರತೆಯನ್ನು ಕಾಣಬಹುದು.

ಸೈನಿಕರ ಮೇಲಿನ ಅಪಾರ ಪ್ರೀತಿಯಿಂದ ಗೋಪಾಲಕೃಷ್ಣ ಅವರನ್ನು ತಮಗೆ ಪರಿಚಯವಿಲ್ಲದಿದ್ದರೂ ಇಂತಹ ಪುಸ್ತಕ ಬರೆಯಲ್ಪಡುತ್ತಿದೆ ಎಂದಾಗ ವಿಚಾರ ಮಾಡದೆ, ಪ್ರಕಟಿಸುವುದೆಂದು ತೀರ್ಮಾನಿಸಿದ್ದು ಇದು ತನ್ನ ಪ್ರಕಾಶನವು ಪ್ರಕಟಿಸಿದ ಪುಸ್ತಕಗಳಲ್ಲೆ ಶ್ರೇಷ್ಠ ಪುಸ್ತಕವೆಂದು ಪ್ರಕಾಶಕರಾದ ಎನ್.ಎಮ್.ಬಿರಾದಾರ ಅವರು ಹೇಳಿದ್ದಾರೆ.

Latest 5

Related Posts